ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್ ಅಭ್ಯರ್ಥಿ..!
ಪುರಿ: ಸೂರತ್, ಇಂದೋರ್ ಆಯಿತು,. ಇದೀಗ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುಚರಿತ ಮೊಹಾಂತಿ (Sucharita Mohanty) ಅವರು ನಾನು ಪುರಿ ಕ್ಷೇತ್ರದಿಂದ ಸ್ವರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಪುರಿಯಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಪಕ್ಷ ಹಣ ನೀಡಿಲ್ಲ, ಆ ಕಾರಣಕ್ಕೆ ಹಣ ಕೊರತೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸುಚರಿತ ಮೊಹಾಂತಿ ಅವರು ಶುಕ್ರವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದು, ನನಗೆ ಹಣಕಾಸಿನ ಕೊರತೆಯಿರುವ ಕಾರಣ ನನ್ನ ಪ್ರಚಾರಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಮೊಹಾಂತಿ ಅವರು ತಮ್ಮ ಪತ್ರದಲ್ಲಿ ಹೀಗೆ ಬರೆದಿದ್ದಾರೆ. ” ಪಕ್ಷವು ನನಗೆ ಧನಸಹಾಯವನ್ನು ನಿರಾಕರಿಸಿದ ಕಾರಣ ಪುರಿ ಸಂಸದೀಯ ಕ್ಷೇತ್ರದಲ್ಲಿ ನಮ್ಮ ಪ್ರಚಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಎಐಸಿಸಿ ಒಡಿಶಾ ಉಸ್ತುವಾರಿ ಡಾ ಅಜೋಯ್ ಕುಮಾರ್ ಅವರು ನನ್ನನ್ನು ನಾನು ರಕ್ಷಿಸಿಕೊಳ್ಳುವಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಚಾರಕ್ಕೆ ಧನಸಹಾಯ ನೀಡಲು ವಿಫಲವಾದ ಕಾರಣಗಳನ್ನು ನೀಡಿ ಹಾಗೂ ನಾನು ಉಳಿತಾಯ ಮಾಡಿದ ಎಲ್ಲ ಹಣವನ್ನು ಈಗಾಗಲೇ ಪ್ರಚಾರಕ್ಕೆ ಹಾಕಿದ್ದೇನೆ. ಇನ್ನು ಮುಂದಿನ ಪ್ರಚಾರಕ್ಕೆ ಹಣ ನನ್ನಲ್ಲಿ ಇಲ್ಲ” ಎಂದು ಪತ್ರ ಬರೆದಿದ್ದಾರೆ.
ನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತನಾಗಿದ್ದೆ. ಆದರೆ ಈಗ ರಾಜಕೀಯ ಕ್ಷೇತ್ರಕ್ಕಾಗಿ ನನ್ನನ್ನೂ ನಾನು ತೋಡಗಿಸಿಕೊಂಡಿದ್ದೇನೆ. ನನ್ನಲ್ಲಿರುವ ಎಲ್ಲ ಹಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಪ್ರಗತಿಪರ ರಾಜಕೀಯಕ್ಕಾಗಿ ನಾನು ಸಾರ್ವಜನಿಕ ದೇಣಿಗೆ ಅಭಿಯಾನವನ್ನು ಮಾಡಿದೆ, ಆದರೆ ಅದು ವಿಫಲವಾಗಿದೆ ಎಂದರು.
ಕಾಂಗ್ರೆಸ್ ಪುರಿಯಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಸುಚರಿತ ಮೊಹಾಂತಿ ಅವರನ್ನು ಘೋಷಣೆ ಮಾಡಿದೆ, ಆದರೆ ಅವರು ಇನ್ನು ನಾಮಪತ್ರ ಸಲ್ಲಿಸಿಲ್ಲ. ಮತ್ತೊಂದೆಡೆ, ಒಡಿಶಾ ಕ್ಷೇತ್ರದಿಂದ ಬಿಜೆಡಿಯ ಅರೂಪ್ ಪಟ್ನಾಯಕ್ ಮತ್ತು ಬಿಜೆಪಿಯ ಸಂಬಿತ್ ಪಾತ್ರಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಇದರ ಜತೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ನಿಕಟವರ್ತಿ ವಿಕೆ ಪಾಂಡಿಯನ್ ಅವರ ಪತ್ನಿ ಒಡಿಶಾದ ಹಿರಿಯ ಅಧಿಕಾರಿ ಸುಜಾತಾ ಆರ್ ಕಾರ್ತಿಕೇಯನ್ ಅವರನ್ನು ಸಾರ್ವಜನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಾರ್ವಜನಿಕರಲ್ಲದ ಇಲಾಖೆಗೆ ವರ್ಗಾಯಿಸಲು ಚುನಾವಣಾ ಆಯೋಗ ಗುರುವಾರ ಆದೇಶ ನೀಡಿದೆ.