ಬೆಂಗಳೂರು: ತಮಿಳುನಾಡಿನಲ್ಲೊಂದು ಅಮಾನುಷ ಕ್ರೌರ್ಯದ (Crime news) ಘಟನೆ ನಡೆದಿದೆ. ಪಾಪಿಯೊಬ್ಬ ನಡುಬೀದಿಯಲ್ಲಿ ತನ್ನ ಚಿಕ್ಕಪ್ಪನ ಮೇಲೆ ಪೆಟ್ರೋಲ್ (Petrol) ಸುರಿದು ಬೆಂಕಿಯಿಟ್ಟು (Man Burnt Alive) ಪೈಶಾಚಿಕತೆ ಮೆರೆದಿದ್ದಾನೆ.
ಜಮೀನು ವಿವಾದಕ್ಕೆ ನಡುಬೀದಿಯಲ್ಲೇ ಪೆಟ್ರೋಲ್ ಸುರಿದು ಚಿಕ್ಕಪ್ಪನಿಗೆ ಬೆಂಕಿಯಿಟ್ಟ ಭೂಪ.!
![ಜಮೀನು ವಿವಾದಕ್ಕೆ ನಡುಬೀದಿಯಲ್ಲೇ ಪೆಟ್ರೋಲ್ ಸುರಿದು ಚಿಕ್ಕಪ್ಪನಿಗೆ ಬೆಂಕಿಯಿಟ್ಟ ಭೂಪ.!](https://urtv24.com/wp-content/uploads/2024/04/WhatsApp-Image-2024-04-22-at-11.58.27.jpeg)
ರಾಜ್ಯದ ತಮಿಳುನಾಡು ಗಡಿಭಾಗ ಕೃಷ್ಣಗಿರಿ ಜಿಲ್ಲೆಯ ಕಾವೇರಿಪಟ್ಟಣಂ ಸಮೀಪದ ಚಂದಾಪುರ ಗ್ರಾಮದಲ್ಲಿ ಈ ಬರ್ಬರ ಘಟನೆ ನಡೆದಿದೆ. ಜಮೀನು ವಿವಾದದ (land dispute) ಕಾರಣಕ್ಕೆ ಚಿಕ್ಕಪ್ಪನಿಗೆ ಬೆಂಕಿ ಇಟ್ಟಿದ್ದಾನೆ ಪಾತಕಿ ಮಗ. ಈತನ ಅಮಾನವೀಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿನ್ನವನ್(55) ದಾಳಿಗೆ ಒಳಗಾದ ವ್ಯಕ್ತಿ. ಸೆಂಥಿಲ್(26) ಚಿಕ್ಕಪ್ಪನಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಪಾಪಿ. ಕಳೆದ ಕೆಲ ವರ್ಷಗಳಿಂದ ಎರಡು ಕುಟುಂಬಗಳ ನಡುವೆ ನಡೆಯುತ್ತಿದ್ದ ಜಮೀನು ವಿವಾದ ಮುಂದುವರಿದು ಹೀಗೆ ಆಗಿದೆ. ಸೆಂಥಿಲ್ ಜಮೀನಿಗೆ ಚಿನ್ನವನ್ ಅವರ ಜಮೀನಿನ ಮೂಲಕವೇ ಓಡಾಡಬೇಕಿತ್ತು. ತನ್ನ ಜಮೀನಿನಲ್ಲಿ ಓಡಾಡಬಾರದೆಂದು ಚಿನ್ನವನ್ ಕುಟುಂಬ ಅಡ್ಡಿ ಪಡಿಸಿತ್ತು.
ಕಳೆದ ನವೆಂಬರ್ 19ನೇ ತಾರೀಕಿನಂದು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಸೆಂಥಿಲ್ ಕುಟುಂಬ ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಅಂದಿನಿಂದ ಇಲ್ಲಿಯವರೆಗೆ ಯಾರಿಗೂ ಸಿಗದೆ ಚಿನ್ನವನ್ ಕುಟುಂಬ ಪರಾರಿಯಾಗಿತ್ತು. ನಿನ್ನೆ ಕಾವೇರಿಪಟ್ಟಣಂನ ಅಂಗಡಿ ಸಮೀಪ ಚಿನ್ನವನ್ ಎದುರಾಗಿದ್ದ. ಈ ವೇಳೆ ವಾಟರ್ ಬಾಟಲ್ನಲ್ಲಿ ತಂದಿದ್ದ ಪೆಟ್ರೋಲ್ ಅನ್ನು ನಡುರಸ್ತೆಯಲ್ಲಿ ಚಿನ್ನವನ್ ಮೇಲೆ ಎರಚಿ ಸೆಂಥಿಲ್ ಬೆಂಕಿ ಕೊಟ್ಟಿದ್ದಾನೆ.
ಅಲ್ಲಿನ ಜನರು ಸೆಂಥಿಲ್ನ್ನು ಹಿಡಿಯಲು ಮುಂದಾದರೂ ಆಕ್ರೋಶಗೊಂಡಿದ್ದ ಸೆಂಥಿಲ್ ತನ್ನ ಚಿಕ್ಕಪ್ಪ ಚಿನ್ನವನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಧಗಧಗನೆ ಹೊತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ನರಳಾಡುತ್ತಿದ್ದ ಚಿನ್ನವನ್ನನ್ನು ಸ್ಥಳೀಯರು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶೇಖಡಾ 70% ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.