ಸುಮಲತಾ ಅಂಬರೀಷ್ ರಾಜಕೀಯ ಭವಿಷ್ಯ ಇಂದು ನಿರ್ಧಾರ..!

ಬೆಂಗಳೂರು, ಏಪ್ರಿಲ್ 03: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿರುವ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಇಂದು ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸಲಿದ್ದಾರೆ. ಮಂಡ್ಯದಲ್ಲಿ ಮತ್ತೊಂದು ಸಭೆ ನಡೆಸಲಿರುವ ಸುಮಲತಾ ನಿರ್ಧಾರವೇನೆಂದು ತಿಳಿಯಲು ಕೌಂಟ್‌ಡೌನ್ ಶುರುವಾಗಿದೆ.
ಸುಮಲತಾ ಅವರ ಮುಂದಿನ ರಾಜಕೀಯ ನಡೆ ಕುರಿತು ತೀವ್ರ ಕುತೂಹಲ ಕೆರಳಿದ್ದು, ಈ ಕೌತುಕಕ್ಕೆ ಇಂದು ತೆರೆ ಬೀಳಲಿದೆ. ಮಂಡ್ಯಕ್ಕೆ ತೆರಳಲಿರುವ ಸುಮಲತಾ ಅವರು ಅಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಳಿಕಾಂಬ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅಲ್ಲಿಂದಲೇ ಅವರು ಮಂಡ್ಯ ಕಾರ್ಯಕರ್ತರ ಸಭೆ ಆಗಮಿಸಲಿದ್ದಾರೆ.
ಸಭೆಯಲ್ಲಿ ಅಭಿವೃದ್ಧಿ ಸಾಕ್ಷ್ಯ ಚಿತ್ರ ಬಿಡುಗಡೆ ಸಭೆಯಲ್ಲಿ ಸುಮಲತಾ ಕೈಗೊಳ್ಳುವ ನಿರ್ಧಾರಕ್ಕೆ ಕ್ಷೇತ್ರದ ಸ್ವಾಭಿಮಾನಿ ಜನರು, ಕಾರ್ಯಕರ್ತರು ಜೊತೆಗೆ ಪುತ್ರ ಅಭಿಷೇಕ್ ಅಂಬರೀಶ್, ನಟ ದರ್ಶನ್ ಅವರು ಸಹ ಇರಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮಂಡ್ಯದಲ್ಲಿ ಸಂಸದರ ಅಭಿವೃದ್ಧಿ ಕಾರ್ಯಗಳ ಕುರಿತು ಸಿದ್ಧಪಡಿಸಿರುವ ಸಾಕ್ಷ್ಯ ಚಿತ್ರವನ್ನು ನಟ ದರ್ಶನ್ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಬಿಜೆಪಿಯು ಸುಮಲತಾ ಅವರ ಬೆಂಬಲ ಕೋರಿದ್ದಾರೆ. ಕೇಂದ್ರ ಹೈಕಮಾಂಡ್ ನಾಯಕರು ತಮಗೆ ಸೂಕ್ತ ಸ್ಥಾನಮಾನ, ಗೌರವ ನೀಡುವುದಾಗಿ ತಿಳಿಸಿದ್ದಾರೆ. ಇತ್ತ ಮಂಡ್ಯದ ಮೈತ್ರಿ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರು ಸಹ ಸುಮಲತಾ ಅವರನ್ನು ಭೇಟಿ ಮಾಡಿ ಹಳೆಯ ಏನೇ ವೈಮಸ್ಸಿದ್ದರು ಮನಸ್ಸಿಂದ ತೆಗೆದು ಹಾಕಿ, ಕ್ಷೇತ್ರದಲ್ಲಿ ಮೈತ್ರಿಗೆ ಬೆಂಬಲಿಸಿ ಎಂದು ಕೇಳಿ ಕೊಂಡಿದ್ದಾರೆ.
ಇದೆಲ್ಲ ಬೆಳವಣಿಗೆ ಜೊತೆಗೆ ನಾನು ಮಂಡ್ಯದ ಜನರನ್ನು ನೋಯಿಸುವ ಕೆಲಸ ಮಾಡುವುದಿಲ್ಲ. ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗಲ್ಲ. ನನ್ನ ಏನೇ ನಿರ್ಧಾರಗಳಿದ್ದರೂ ಅದು ಕಾರ್ಯಕರ್ತರ ಜತೆ ಚರ್ಚಿಸಿ ಮಂಡ್ಯದಲ್ಲಿಯೇ ತಿಳಿಸುವುದಾಗಿ, ಈ ಬಗ್ಗೆ ಏಪ್ರಿಲ್ 3ರಂದು ನಿರ್ಧಾರ ಪ್ರಕಟಿಸುವುದಾಗಿ ಅವರು ಹೇಳಿದ್ದರು.
ಮಂಡ್ಯದಲ್ಲಿ ಕಳೆದ ಭಾರಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತಗಳಿಂದ ಜಯಭೇರಿ ಭಾರಿಸಿದ ಸುಮಲತಾ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ ಈ ಬಾರಿ ಟಿಕೆಟ್ ಕಳೆದುಕೊಳ್ಳಬೇಕಾಯಿತು. ಆದರೆ ಅವರು ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸದ ಹಿನ್ನೆಲೆ ಅವರು ಪಕ್ಷೇತರವಾಗಿ ಮತ್ತೆ ಮಂಡ್ಯದಿಂದ ಕಣಕ್ಕಿಳಿಯುತ್ತಾರಾ?, ಇಲ್ಲಾ ಜೆಡಿಎಸ್ ಅಭ್ಯರ್ಥಿ ಬೆಂಬಲಿಸುತ್ತಾರಾ? ಎಂಬ ಬಗ್ಗೆ ಚರ್ಚೆ ಆಗಿದೆ.