Captain Brijesh Chowta: ಏಪ್ರಿಲ್ ನಾಲ್ಕರಂದು ಇದು ಹಿಂದುತ್ವದ ಭದ್ರಕೋಟೆ ಎಂಬ ಘೋಷಣೆ ಅಡಿಯಲ್ಲಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ಲೋಕಸಭೆಯ ಬಿಜೆಪಿ ಅಭ್ಯರ್ಥಿ ಬ್ರಿಜೇಷ್ ಚೌಟ(Captain Brijesh Chowta) ಇದು ಹಿಂದುತ್ವದ ಭದ್ರ ಕೋಟೆ ಎಂಬ ಅಭಿಯಾನದ ಅಡಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಪೋಸ್ಟರ್ ಗಳನ್ನ ಹಂಚಿಕೊಂಡಿರುವ ಬಿಜೆಪಿ ಏಪ್ರಿಲ್ ನಾಲ್ಕರಂದು ನಾಮಪತ್ರ ಸಲ್ಲಿಸುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಬಿಜೆಪಿಯ ಮಂಗಳೂರು ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ, ಯುವಕರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ದೇಶದ ಅತ್ಯುನ್ನತ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಚೌಟ ಪುತ್ತೂರು, ಸುಳ್ಯ ಭಾಗದಲ್ಲಿ ಬಹುತೇಕ ಕಾರ್ಯಕರ್ತರ ಮನೆಗಳಿಗೆ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿರುವುದು, ಅಲ್ಲಿ ಕಾರ್ಯಕರ್ತರು ಸ್ಪಂದಿಸಿರುವುದು ಬಿಜೆಪಿಗೆ ಇನ್ನಷ್ಟು ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ, ಯುವ ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸತತ ಏಳು ವರ್ಷಗಳಿಂದ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಯಶಸ್ವಿಯಾಗಿ ಕಂಬಳ ಆಯೋಜಿಸಿದ್ದರು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಂಟ ಸಮುದಾಯದ ಪ್ರಮುಖ ಗುತ್ತಿನ ಮನೆಗೆ ಸೇರಿದ್ದರೂ ಅವಿವಾಹಿತರಾಗಿಯೇ ಇದ್ದು ತನ್ನ ಸಂಪೂರ್ಣ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.ಹೀಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜಕೀಯಕ್ಕೆ ಆಗಮಿಸಿ, ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.