ಕಾಪು: ಮಹಿಳಾ ಪೇದೆ ಆತ್ಮಹತ್ಯೆ ಪ್ರಕರಣ; ಪತಿ ಬಂಧನ..!
ಕಾಪು: ಕಾಪು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಜ್ಯೋತಿ (32) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಆರೋಪದಡಿ ಕಾಪು ಪೊಲೀಸರು ಮಾ.30ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರವಿಕುಮಾರ್(35) ಬಂಧಿತ ಆರೋಪಿ. ಈತ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2017ರಲ್ಲಿ ತನ್ನದೇ ಊರಿನ ಜ್ಯೋತಿಯನ್ನು ಮದುವೆಯಾಗಿದ್ದ. ಜ್ಯೋತಿ ಕಾಪು ಠಾಣೆ ಸಿಬಂದಿಯಾಗಿರುವುದರಿಂದ ಇವರಿಬ್ಬರು ಠಾಣೆಯ ಸಮೀಪದಲ್ಲೇ ಇರುವ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು. ಮಾ. 29ರಂದು ರಾತ್ರಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಇದೇ ವಿಚಾರದಲ್ಲಿ ನೊಂದುಕೊಂಡು ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡೈರಿ ಪತ್ತೆ: ಜ್ಯೋತಿ ರೂಮಿನಲ್ಲಿ ಡೈರಿಯೊಂದು ಲಭಿಸಿದೆ. ಅದರಲ್ಲಿ ನನ್ನ ಸಾವಿಗೆ ಪತಿಯ ಅನುಮಾನವೇ ಕಾರಣ ಎಂದು ಉಲ್ಲೇಖಿಸಲಾಗಿದೆ. ಇತರ ಕಾರಣಗಳೂ ಡೈರಿಯಲ್ಲಿದ್ದು, ಆ ವಿವರಗಳನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಅವರ ತಾಯಿ ದೇವಮ್ಮ ವಿಟ್ಲಾಪುರ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ : 24 ಲೀಟರ್ ಮದ್ಯ ವಶ
ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 31 ರಂದು ಅಬಕಾರಿ ಇಲಾಖೆ ವತಿಯಿಂದ 10,680 ರೂ. ಮೌಲ್ಯದ 24.030 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೈಕ್ ಗೆ ಲಾರಿ ಡಿಕ್ಕಿ ಅಪ್ರಾಪ್ತ ಸವಾರ ಸಾವು
ಗಂಗೊಳ್ಳಿ : ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಪ್ರಾಪ್ತ ಬೈಕ್ ಸವಾರ ಸಾವನಪ್ಪಿ ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಗಂಗೊಳ್ಳಿ ಅಂಚೆ ಕಚೇರಿ ಬಳಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಮುಹಮ್ಮದ್ ಕಾಶಿಫ್(17) ಎಂದು ಗುರುತಿಸಲಾಗಿದೆ. ಸಹಸವಾರ ಮುಹಮ್ಮದ್ ಫೈಝ್(14) ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಸ್ತು ವಾಹನವು ಕೂಡಲೇ ಆಂಬ್ಯುಲೆನ್ಸ್ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ತಂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಅದರಲ್ಲಿ ಗಂಭೀರವಾಗಿ ಗಾಯಗೊಂಡ ಕಾಶಿಫ್ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.