ಬಿಲ್ಲವ ಸಮುದಾಯದ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ಕೊಡುತ್ತೇವೆ; ಸತ್ಯಜೀತ್ ಸುರತ್ಕಲ್
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಎಲ್ಲಾ ಅಭ್ಯರ್ಥಿಗಳನ್ನು ನಾರಾಯಣಗುರು ವಿಚಾರ ವೇದಿಕೆ ಪಕ್ಷತೀತವಾಗಿ ಬೆಂಬಲಿಸಲಿದೆ ಎಂದು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸತ್ಯಜೀತ್ ಅವರು ದಕ್ಷಿಣ ಕನ್ನಡದಲ್ಲಿ ಪದ್ಮರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಕಣದಲ್ಲಿದ್ದು ವೇದಿಕೆ ಅವರನ್ನು ಬೆಂಬಲಿಸಲಿದೆ ಎಂದರು. ವೇದಿಕೆ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸತ್ಯಜೀತ್ ಅವರು ಬದಲು ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುವವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಹಳ ವರ್ಷಗಳ ನಂತರ ಮೂರು ಸ್ಥಾನ ಗಳಲ್ಲಿ ನಾರಾಯಣ ಗುರು ಸಮಾಜಕ್ಕೆ ಅವಕಾಶ ಸಿಕ್ಕಿದೆ. ಬಿಜೆಪಿ ಯಲ್ಲಿ 33ವರ್ಷಗಳ ಬಳಿಕ ಬಿಲ್ಲವ ಅಭ್ಯರ್ಥಿಗೆ ಅವಕಾಶ ಸಿಕ್ಕಿದೆ.ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಜನಾರ್ಧನ ಪೂಜಾರಿಯ ಬಳಿಕ ಈಗ ಪದ್ಮರಾಜ್ ಗೆ ಅವಕಾಶ ಸಿಕ್ಕಿದೆ.ಪದ್ಮರಾಜ್, ಗೀತಾ ಶಿವರಾಜಕುಮಾರ್,ಕೋಟ ಶ್ರೀನಿವಾಸ ಪೂಜಾರಿ ಪರ ಪ್ರಚಾರ ಮಾಡುತ್ತೇವೆ.ರಾಜಕೀಯ ಪಕ್ಷವನ್ನ ಪಕ್ಕಕಿಟ್ಟು ಬಿಲ್ಲವ ಸಮಾಜ ಎಂದು ದುಡಿಯುತ್ತೇವೆ. ಯಾರು ಏನು ಬೇಕಾದರೂ ಹೇಳಬಹುದು, ಸಾಮಾಜಿಕ ಜಾಲತಾಣಗಳಲ್ಲಿ ಬರೀಬಹುದು,ನನ್ನ ಕಷ್ಟದ ದಿನಗಳಲ್ಲಿ ಯಾರು ನಿಂತುಕೊಂಡಿದ್ರು ಅವರ ಮಾತನ್ನ ಮಾತ್ರ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಗೆ 15 ದಿನ ನ್ಯಾಯಾಂಗ ಬಂಧನ..!
ನವದೆಹಲಿ: ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಮವಾರ ದೆಹಲಿ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೇಜ್ರಿವಾಲ್ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿ ಅವಧಿ ಇಂದು ಮುಗಿದಿದ್ದು, ಆರೋಪಿಯನ್ನು ರೋಸ್ ಅವೆನ್ಯೂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು, ಆರೋಪಿಯನ್ನು ಏಪ್ರಿಲ್ 15 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಎಎಪಿ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ನ್ಯಾಯಾಲಯದಲ್ಲಿ ಹಾಜರಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಮರುದಿನ, ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಆರೋಪಿ ದೆಹಲಿ ಸಿಎಂ ಅನ್ನು ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಗೆ ನೀಡಿದ್ದರು. ನಂತರ ಕೇಜ್ರಿವಾಲ್ ಅವರ ಇಡಿ ಕಸ್ಟಡಿ ಅವಧಿಯನ್ನು ಏಪ್ರಿಲ್ 1 ರವರೆಗೆ ನಾಲ್ಕು ದಿನಗಳ ಕಾಲ ವಿಸ್ತರಿಸಿತ್ತು.
ಕಸ್ಟಡಿ ವಿಚಾರಣೆ ಸಮಯದಲ್ಲಿ ಐದು ದಿನಗಳಲ್ಲಿ ಕೇಜ್ರಿವಾಲ್ ಅವರ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಅವರು ತಪ್ಪಿಸಿಕೊಳ್ಳುವ ಉತ್ತರ ನೀಡುತ್ತಿದ್ದಾರೆ ಎಂದು ಇಡಿ ಹೊಸ ರಿಮಾಂಡ್ ಅರ್ಜಿಯಲ್ಲಿ ಹೇಳಿತ್ತು. ಕಸ್ಟಡಿ ಅವಧಿಯಲ್ಲಿ ಇತರ ಮೂವರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ