ದಿನೇಶ್ ಕಾರ್ತಿಕ್ ಕೊಟ್ಟ ಸುಳಿವೇನು? IPL ಬಳಿಕ ನಿವೃತ್ತಿ ಆಗ್ತಾರ..?
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ದಿಟ್ಟ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. ಇದೀಗ ಸಿಎಸ್‌ಕೆ ಎದುರಿನ ಪಂದ್ಯ ಮುಕ್ತಾಯದ ಬಳಿಕ ಡಿಕೆ ಇದೀಗ ತಾವು ಈ ಆವೃತ್ತಿಯ ಐಪಿಎಲ್ ಬಳಿಕ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡವು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದು ಚೆನ್ನೈ ಮೈದಾನದಲ್ಲಿ ಡಿಕೆ ಆಡಿದ ಕಟ್ಟಕಡೆಯ ಐಪಿಎಲ್ ಪಂದ್ಯ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್ ಅಡುತ್ತಾ ಬಂದಿರುವ ದಿನೇಶ್ ಕಾರ್ತಿಕ್ ಆರ್‌ಸಿಬಿ ಸೇರಿದಂತೆ 6 ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇನ್ನು ದಿನೇಶ್ ಕಾರ್ತಿಕ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇನ್ನು 2024ನೇ ಸಾಲಿನ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ದಿನೇಶ್ ಕಾರ್ತಿಕ್ ಈ ಆವೃತ್ತಿಯ ಐಪಿಎಲ್ ಬಳಿಕ ಐಪಿಎಲ್ ವೃತ್ತಿಬದುಕಿಗೆ ದಿನೇಶ್ ಕಾರ್ತಿಕ್ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿತ್ತು. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ದಿನೇಶ್ ಕಾರ್ತಿಕ್ ವೀಕ್ಷಕವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಸ್ವತಃ ಡಿಕೆ ತಮ್ಮ ನಿವೃತ್ತಿಯ ವರದಿಯನ್ನು ಖಚಿತಪಡಿಸಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಪತ್ರಕರ್ತರು ಇದು ನೀವು ಚೆಪಾಕ್‌ನಲ್ಲಿ ಆಡಿದ ಕೊನೆಯ ಐಪಿಎಲ್ ಪಂದ್ಯವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ, “ಇದು ತುಂಬಾ ಒಳ್ಳೆಯ ಪ್ರಶ್ನೆ. ನನ್ನ ಪ್ರಕಾರ ಹಾಗಾಗದೇ ಇರಲಿ ಎಂದು ಆಶಿಸುತ್ತೇನೆ. ಯಾಕೆಂದರೆ ಪ್ಲೇ ಆಫ್‌ನ ಕೆಲವು ಪಂದ್ಯಗಳು ಇಲ್ಲಿ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ಇಲ್ಲಿ ಪ್ಲೇ ಆಫ್ ಪಂದ್ಯವನ್ನಾಡಲು ಬಂದರೆ ಅದು ಚೆನ್ನೈನಲ್ಲಿ ನಾನು ಆಡಲಿರುವ ಕೊನೆಯ ಪಂದ್ಯ ಎನಿಸಲಿದೆ. ಹಾಗೆಯೇ ಆಗಲಿದೆ ಎಂದು ನನಗನಿಸುತ್ತಿದೆ” ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಚೆನ್ನೈ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿತು. ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಉತ್ತಮ ಆರಂಭ ಒದಗಿಸಿಕೊಟ್ಟರಾದರೂ, ಮುಸ್ತಾಫಿಜುರ್ ಮಾರಕ ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ ಕೇವಲ 78 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಫ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ 6ನೇ ವಿಕೆಟ್‌ಗೆ ಜತೆಯಾದ ದಿನೇಶ್ ಕಾರ್ತಿಕ್ ಹಾಗೂ ಅನೂಜ್ ರಾವತ್ 95 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತ 170ರ ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ದಿನೇಶ್ ಕಾರ್ತಿಕ್ 26 ಎಸೆತಗಳನ್ನು ಎದುರಿಸಿ ಅಜೇಯ 38 ರನ್ ಸಿಡಿಸಿದರು.
ಇದೀಗ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.