karnataka Election: ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಘಟಾನುಘಟಿ ಅಭ್ಯರ್ಥಿಗಳ ಬಂಡಾಯದ ನಡುವೆ ಗೆಲುವು ಸುಲಭವೇ..?
ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆಲ್ಲುವ 2019 ರ ಸಾಧನೆ ತನ್ನ ಹೆಸರಲ್ಲಿ ಹೊಂದಿರುವ ಬಿಜೆಪಿಗೆ ಈ ಬಾರಿ ರಾಜ್ಯದಲ್ಲಿ ಗೆಲುವು ಅಷ್ಟು ಸುಲಭವಲ್ಲ. ಬಂಡಾಯದ ಬಿರುಗಾಳಿಯಲ್ಲಿ ಸಿಲುಕಿರುವ ಬಿಜೆಪಿಗೆ ಚುನಾವಣಾ ಪ್ರಚಾರದಲ್ಲಿಯೂ ಅಡೆ ತಡೆಗಳು ತಪ್ಪಿಲ್ಲ.
ಮುಂಬರುವ ಲೋಕಸಭಾ ಚುನಾವಣೆಗಾಗಿ ರಾಜ್ಯದ ಪ್ರಮುಖ ನಾಯಕರಿಗೆ ಟಿಕೆಟ್ ನಿರಾಕರಿಸಿದ ಬಳಿಕ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಸಮಾಧಾನದ ಹೊಗೆಯನ್ನು ಆರಿಸುವ ಕೆಲಸ ಮಾಡಲು ನಾಯಕರು ಮುಂದಾಗಿದ್ದರೂ ಕೂಡ ಚುನಾವಣಾ ಪ್ರಚಾರಗಳಲ್ಲಿ ಪ್ರಮುಖ ನಾಯಕರು ಭಾಗಿಯಾಗುತ್ತಿಲ್ಲ. ಹೀಗಾಗಿ ಎಲೆಕ್ಷನ್ ಕ್ಯಾಂಪೇನ್ ಹಳಿತಪ್ಪುವ ಸಂಭವ ಹೆಚ್ಚಿದೆ.
ಇನ್ನು ಕಾಂಗ್ರೆಸ್ ನಿಂದ ಮೂರನೇ ಪಟ್ಟಿ ಇಂದು ಸಂಜೆ ಬಿಡುಗಡೆಗೊಳ್ಳಲಿದ್ದು, ಯಾರೆಲ್ಲ ಅಭ್ಯರ್ಥಿಗಳು ಕಣಕ್ಕಿಳಿಲಿಯದಿದ್ದಾರೆ ಎಂಬ ಕುತೂಹಲವು ಇದೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲುವು ಸಾಧಿಸಿದ್ದು, ತದನಂತರ ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಬಾರಿ ಅಂತರದಲ್ಲಿ ಗೆಲುವು ಸಾಧಿಸಿತ್ತು. ಹಾಗಾಗಿ ಈ ಬಾರಿಯ ಲೋಕಸಭೆಯಲ್ಲಿ ಒಂದಷ್ಟು ಜಾಸ್ತಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಾಳಯದಲ್ಲಿ ತಂತ್ರಗಾರಿಕೆ ನಡೆಯುತ್ತಿದೆ.
ಕಳೆದ ವಿಧಾನಭಾ ಚುಣಾವಣೆಯ ಸಂದರ್ಭ ಪುನರಾವರ್ತನೆ ಈ ಬಾರಿ ಲೋಕಸಭೆ ಟಿಕೆಟ್ ನಿರಾಕರಿಸಿದ ಕಾರಣ ಕೆಎಸ್ ಈರ್ಶವರಪ್ಪ, ಜೆಸಿ ಮಾಧುಸ್ವಾಮಿ, ಡಿವಿ ಸದಾನಂದಗೌಡ, ಕರಡಿ ಸಂಗಣ್ಣ ಸೇರಿದಂತೆ ಕೆಲವು ಹಿರಿಯ ನಾಯಕರ ಬಂಡಾಯವು ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉಂಟಾದ ಬಂಡಾಯವನ್ನೆ ನೆನಪಿಸುತ್ತಿದೆ. ಮಾಜಿ ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಕೆಎಸ್ ಈಶ್ವರಪ್ಪ ಅವರು ಟಿಕೆಟ್ ಸಿಕ್ಕಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಕರಡಿ ಸಂಗಣ್ಣ ತಮ್ಮ ನಿರ್ಧಾರ ಮಾರ್ಚ್ 21ಕ್ಕೆ ತಿಳಿಸಲಿದ್ದಾರೆ.
ಕಳೆದ ವಾರ ಪ್ರಕಟವಾದ ಬಿಜೆಪಿ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಸ್ಥಾನ ಪಡೆದಿಲ್ಲ. ಹಾವೇರಿ ಸ್ಥಾನ ತನ್ನ ಮಗನಿಗೆ ಸಿಕ್ಕಿಲ್ಲ ಎಂದು ಹೈಕಮಾಂಡ್ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸಂಸದ ಡಿವಿ ಸದಾನಂದಗೌಡ ಕೂಡ ಅತೃಪ್ತ ನಾಯಕರ ಪಟ್ಟಿಗೆ ಸೇರಿದ್ದು, ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.
ಕೊಪ್ಪಳದಿಂದ ಎರಡು ಬಾರಿ ಶಾಸಕರಾಗಿದ್ದ ಕರಡಿ ಸಂಗಣ್ಣ ಅಮರಪ್ಪ ಕೂಡ ಬಂಡಾಯ ಎದ್ದಿದ್ದು, ಪಕ್ಷ ಬದಲಾಯಿಸುವ ಹಂತದಲ್ಲಿದ್ದಾರೆ. ಇನ್ನು, ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಕೂಡ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ತುಮಕೂರಿಗೆ ಟಿಕೆಟ್ ಪಡೆದಿರುವ ವಿ ಸೋಮಣ್ಣ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದಿದ್ದು, ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿವಾದ ಮತ್ತು ಕಳಪೆ ಆಡಳಿತ ಬಿಜೆಪಿ ಸರ್ಕಾರದ ಪತನಕ್ಕೆ ಕಾರಣವಾಗಿತ್ತು, ಇದರ ಜೊತೆಗೆ ಹಿರಿಯ ನಾಯಕರ ಭಿನ್ನಾಭಿಪ್ರಾಯವು ಸೋಲಿಗೆ ಪುಷ್ಠಿ ನೀಡಿತ್ತು. ಅದು ಈ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆಯಿದೆ. ಹೊಸ ಬೆಳವಣಿಗೆಯಲ್ಲಿ ಕೇಂದ್ರ ಸಚಿವೆ ಮತ್ತು ರಾಜ್ಯದ ಪ್ರಮುಖ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಮಾತನಾಡಿ ತಮಿಳುನಾಡು ಭಯೋತ್ಪಾದನೆಯ ತರಬೇತಿ ಕೇಂದ್ರವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಮತ್ತೆ ಬಿಜೆಪಿಯ ಇಮೇಜ್ ಅನ್ನು ಡ್ಯಾಮೆಜ್ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಶೋಭಾ ಕರಂದ್ಲಾಜೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತೀವ್ರ ತರಾಟೆ ತೆಗೆದುಕೊಂಡಿದ್ದರು. ಇದಾದ ಬಳಿಕ ಸಚಿವೆ ಕ್ಷಮೆಯಾಚಿಸಿದ್ದು, ತಮ್ಮ ಮಾತು ಹಾಗಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ಎಲ್ಲಾ ಬೆಳವಣಿಗೆಗಳು ರಾಜ್ಯದಲ್ಲಿ ಬಿಜೆಪಿಯ ಗೆಲುವು ಸುಲಭವಲ್ಲ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿವೆ.