ಜಗದೀಶ್ ಶೆಟ್ಟರ್ ದೆಹಲಿ ಭೇಟಿ ಬಳಿಕ ಸ್ಪರ್ಧೆ ಬಗ್ಗೆ ಹೇಳಿದ್ದೇನು?
ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಟಿಕೆಟ್ ಪಡೆಯಲು ಕೊನೆಯ ಹಂತದ ಕಸರತ್ತು ನಡೆಯುತ್ತಿದೆ. ಇತ್ತ ಬೆಳಗಾವಿ ಕೆಲ ಸ್ಥಳೀಯ ಬಿಜೆಪಿ ನಾಯಕರಿಂದ ಟಿಕೆಟ್ ತಪ್ಪಿಸುವ ಕಸರತ್ತು ನಡೆಯುತ್ತಿದೆ. ಮಂಗಳವಾರ ದೆಹಲಿ ಭೇಟಿ ಮಾಡಿ ಬಂದ ಜಗದೀಶ್ ಶೆಟ್ಟರ್ ಏನೆಲ್ಲ ಅಪ್ಡೇಟ್ ಕೊಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಬೆಳಗಾವಿ ಟಿಕೆಟ್ ವಿಚಾರವಾಗಿ ಬೆಳಗಾವಿಗೆ ತೆರಳಿ ಮರಳಿ ಹುಬ್ಬಳ್ಳಿಗೆ ಬಂದ ಜಗದೀಶ್ ಶೆಟ್ಟರ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಚುನಾವಣಾ ಸಮಿತಿ ಸಭೆ ಬುಧವಾರ ಇಲ್ಲವೇ ಗುರುವಾರ ನಡೆಯಲಿದೆ. ಈ ವೇಳೆ ಬೆಳಗಾವಿ ಟಿಕೆಟ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ. ಬಿಜೆಪಿ ವರಿಷ್ಠರು ಹಾಗೂ ಬೆಳಗಾವಿ ಟಿಕೆಟ್ ಆಕಾಂಕ್ಷಿ, ಶಾಸಕರು, ಮಾಜಿ ಶಾಸಕರ ಜೊತೆ ಚರ್ಚಿಸಿದ್ದೇನೆ. ಎಲ್ಲರ ವಿಶ್ವಾಸ ತೆಗೆದುಕೊಂಡಿದ್ದೇನೆ.
ಬೆಳಗಾವಿಯ ಬಿಜೆಪಿ ನಾಯಕರಾದ ಪ್ರಭಾಕರ ಕೋರೆ, ಅಭಯ್ ಪಾಟೀಲ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಶಾಸಕರು, ಮಾಜಿ ಶಾಸಕರು ಹಾಗೂ ಹಲವು ನಾಯಕರ ಜೊತೆ ಚರ್ಚಿಸಿದ್ದೇನೆ. ಪಕ್ಷದ ತೀರ್ಮಾನದಂತೆ ಕೆಲಸ ಮಾಡಲು ಬದ್ಧರಿರುವುದಾಗಿ ಅವರು ಹೇಳಿದ್ದಾರೆಂದು ತಿಳಿಸಿದರು. ನಿಮಗೆ ಬೆಳಗಾವಿ ಟಿಕೆಟ್ ತಪ್ಪಿಸಲು ಮುಂದಾಗಿರುವವರ ಬಗ್ಗೆ ಮಾತನಾಡುವುದಿಲ್ಲ ಎಂದು ನಿರಾಕರಿಸಿದರು. ಇನ್ನು ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಕುರಿತು ನನಗೆ ಏನು ಗೊತ್ತಲ್ಲ. ಸದ್ಯ ನನಗೆ ಬೆಳಗಾವಿ ಟಿಕೆಟ್ ಸಿಕ್ಕೇ ಸಿಗುತ್ತದೆ. ಶೀಘ್ರವೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಹೇಳಿದರು.
ದೆಹಲಿಯಿಂದ ವಾಪಸ್ಸಾದ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯಲ್ಲಿ ತಮ್ಮ ಆಪ್ತರ ಜೊತೆ ಗೌಪ್ತ ಸಭೆ ನಡೆಸಿದ್ದಾರೆ. ಟಿಕೆಟ್ ತಪ್ಪಿದರೆ ಮುಂದೇನು ಮಾಡಬೇಕು ಎಂಬುದು ಸೇರಿದಂತೆ ರಾಜಕೀಯ ನಡೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಬೆರಳೆಣಿಕೆಯಷ್ಟು ಆಪ್ತರಷ್ಟೇ ಸಭೆಯಲ್ಲಿ ಹಾಜರಿದ್ದರು.ಜಗದೀಶ್ ಶೆಟ್ಟರ್ ಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ ದೆಹಲಿಯಿಂದ ಮರಳಿದ ಜಗದೀಶ್ ಶೆಟ್ಟರ್ ಅವರಲ್ಲಿ ಅಷ್ಟೋಂದು ಲವಲವಿಕೆ ಕಂಡು ಬರಲಿಲ್ಲ. ಇನ್ನು ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ಗೆ ಟಿಕೆಟ್ ತಪ್ಪಿಸುವಲ್ಲಿ ಸ್ವಪಕ್ಷದ ನಾಯಕ ಬಿಎಲ್ ಸಂತೋಷ್ ಅವರು ಕೈವಾಡ ಇದೆ. ಅದಕ್ಕಾಗಿ ಅವರ ಬೆಂಬಲಿತ ಸ್ಥಳೀಯ ನಾಯಕರು ಶೆಟ್ಟರ್ಗೆ ಟಿಕೆಟ್ ನೀಡದಂತೆ ವರಿಷ್ಠರಿಗೆ ಮನವಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.