ಪತ್ನಿಗೆ ಅಶ್ಲೀಲ ವಿಡಿಯೋ ಕಳುಹಿಸಿದ ಪತಿಗೆ ಜೈಲು ಶಿಕ್ಷೆ ಸಹಿತ 45 ಸಾವಿರ ದಂಡ ವಿಧಿಸಿದ ನ್ಯಾಯಾಲಯ..!

ಪತ್ನಿಗೆ ಇಮೇಲ್ ಮೂಲಕ ಅಶ್ಲೀಲ ವೀಡಿಯೋ ಕಳುಹಿಸಿದ 30ರ ಹರೆಯದ ವ್ಯಕ್ತಿಯೊಬ್ಬನನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಅಪರಾಧಿ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದ್ದು, ಒಂದು ತಿಂಗಳ ಜೈಲು ಶಿಕ್ಷೆ ಮತ್ತು 45,000 ರೂ. ದಂಡ ವಿಧಿಸಿದೆ. ರಾಜಾಜಿನಗರದ (Rajajinagar) ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿಯ ವಿರುದ್ಧ ಸಿಐಡಿ ಪೊಲೀಸರು (CID Police) ದೋಷಾರೋಪ ಹೊರಿಸಿದ್ದರು. ಶಿಕ್ಷೆಗೊಳಗಾದ ವ್ಯಕ್ತಿಯ ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.
2016 ರಲ್ಲಿ ಇಬ್ಬರೂ ಮದುವೆಯಾಗಿದ್ದರು. ನಂತರದಲ್ಲಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಬಳಿಕ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತನಿಖಾಧಿಕಾರಿಯೊಬ್ಬರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಅಶ್ಲೀಲ ವಿಡಿಯೋ ಕಳುಹಿಸಿದ್ದ ಬಗ್ಗೆ ಸಂತ್ರಸ್ತೆಯ ಕಿರಿಯ ಸಹೋದರ ದೂರು ದಾಖಲಿಸಿದ್ದರು. ನಂತರ ಮಹಿಳೆ ಕೂಡ ಬೆಂಗಳೂರಿಗೆ ಆಗಮಿಸಿ ದೂರು ನೀಡಿದ್ದರು. ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆರೋಪಿಯು ಅಶ್ಲೀಲ ವೀಡಿಯೊ ಲಿಂಕ್ ಅನ್ನು ಆತನ ಪತ್ನಿಗೆ ಕಳುಹಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಇತ್ತೀಚೆಗೆ ನಡೆದ ಇನ್ನೊಂದು ಘಟನೆಯಲ್ಲಿ ಪತ್ನಿಯು ಪತಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿವಾಹ ವಾರ್ಷಿಕೋತ್ಸವದ ಉಡುಗೊರೆ ಕೊಡದ ಕಾರಣ 35 ವರ್ಷದ ಮಹಿಳೆ ಪತಿ ಮಲಗಿದ್ದಾಗ ಅಡುಗೆಮನೆಯ ಚಾಕುವನ್ನು ಬಳಸಿ ಕೈಗೆ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್ಚೆತ್ತುಕೊಂಡ ಪತಿಯು ಪತ್ನಿಯನ್ನು ದೂರ ತಳ್ಳಿ ಅಕ್ಕಪಕ್ಕದವರ ಸಹಾಯ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಪಿ ಮಹಿಳೆಯು ಕೆಲವು ವೈಯಕ್ತಿಕ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದಾರೆ. ಆಕೆಯನ್ನು ತಜ್ಞರ ಬಳಿ ಸಮಾಲೋಚನೆಗೆ ಒಳಪಡಿಸಬೇಕು ಎಂದು ಬಯಸಿದ್ದಾಗಿ ಪತಿ ಹೇಳಿರುವುದನ್ನು ಸಹ ವರದಿ ಉಲ್ಲೇಖಿಸಿದೆ.
ಹವಾ ಸೃಷ್ಟಿಸಲು ಮಾರಕಾಸ್ತ್ರ ಹಿಡಿದು ಪುಂಡಾಟ: 4 ಬಂಧನ
ಏರಿಯಾದಲ್ಲಿ ಹವಾ ಸೃಷ್ಟಿಸಲು ಮಾರಕಾಸ್ತ್ರ ಹಿಡಿದು ಪುಂಡಾಟ ನಡೆಸಿದ್ದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ಕುಶಾಲ್‌ನಗರದ ಮೊಹಮ್ಮದ್ ಫರಾನ್ ಮಲ್ಲಿಕ್ (19), ಅದಾನ್ ಶರೀಫ್ (18) ಹಾಗೂ ಅಕೇಲ್ ಭಾಷಾ (18), ಅಬ್ದುಲ್ ರಿಯಾನ್ (19) ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ ಹಾಗೂ ಎರಡು ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. ಆರೋಪಿಗಳು ಭಾನುವಾರ ಸಂಜೆ 5.30ರ ಸುಮಾರಿಗೆ ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಜೋರಾಗಿ ಕೂಗಾಡುತ್ತಿದ್ದರು. ಈ ಸಂಬಂದ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಏರಿಯಾದಲ್ಲಿ ಹವಾ ಸೃಷ್ಟಿಸಲು ಹಾಗೂ ಶೋಕಿಗಾಗಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಜಳಪಿಸುತ್ತಾ ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.