ಕಾಂಗ್ರೆಸ್ ಟಿಕೆಟ್ ಆಫರ್ ಬೆನ್ನಲ್ಲೇ ಸದಾನಂದ ಗೌಡರ ಮನೆಗೆ ಬಿಜೆಪಿ ನಾಯಕರ ಭೇಟಿ..!

ಲೋಕಸಭೆ ಚುನಾವಣೆ 2024ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು 20 ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸಂಸದ ಡಿ. ವಿ. ಸದಾನಂದ ಗೌಡರಿಗೆ ಟಿಕೆಟ್ ಕೈ ತಪ್ಪಿದೆ. ಈ ಬಾರಿಯ ಚುನಾವಣೆಗೆ ಶೋಭಾ ಕರಂದ್ಲಾಜೆ ಕ್ಷೇತ್ರದ ಅಭ್ಯರ್ಥಿ.
ಕರ್ನಾಟಕದ 28 ಕ್ಷೇತ್ರಗಳಲ್ಲಿ ಎರಡು ಹಂತದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಟಿಕೆಟ್ ಕೈತಪ್ಪಿರುವ ಸದಾನಂದ ಗೌಡರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಕುರಿತು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಲೋಕಸಭೆ ಚುನಾವಣೆ ರಾಜಕೀಯ ವಿದ್ಯಮಾನಗಳ ನಡುವೆಯೇ ಸೋಮವಾರ ಡಿ. ವಿ. ಸದಾನಂದ ಗೌಡರ ಹುಟ್ಟುಹಬ್ಬ. ಬಿಜೆಪಿ ಟಿಕೆಟ್ ಕೈ ತಪ್ಪಿರುವ ಸದಾನಂದ ಗೌಡರು, ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಬಿಜೆಪಿ ನಾಯಕರ ದಂಡು ಅವರ ನಿವಾಸಕ್ಕೆ ಭೇಟಿ ನೀಡಿದೆ.
ಡಿ. ವಿ. ಸದಾನಂದ ಗೌಡ ನಿವಾಸಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಮಾಜಿ ಸಚಿವ ಅಶ್ವತ್ಥ ನಾರಾಯಣ ಹಾಗೂ ಇತರ ನಾಯಕರು ಭೇಟಿ ನೀಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು. ಸದಾನಂದ ಗೌಡರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಡಿ. ವಿ. ಸದಾನಂದ ಗೌಡರನ್ನು ಕಾಂಗ್ರೆಸ್‌ಗೆ ಕರೆತರಲು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕರಾವಳಿ ಭಾಗದ ನಾಯಕರ ಮೂಲಕ ಪ್ರಯತ್ನ ನಡೆಸಿದ್ದಾರೆ ಎಂಬುದು ಸುದ್ದಿ. ಬೆಂಗಳೂರು ಉತ್ತರದಿಂದ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಫರ್ ನೀಡಲಾಗಿದೆ.
ಸೋಮವಾರ ಬೆಳಗ್ಗೆ ಡಿ. ವಿ. ಸದಾನಂದ ಗೌಡರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. “ತಮಗೆ ಟಿಕೆಟ್ ತಪ್ಪಿದ ಕಾರಣಕ್ಕೆ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ನನ್ನ ರಾಜಕೀಯ ನಡೆಯುನ್ನು ಮಂಗಳವಾರ ಪ್ರಕಟಿಸುತ್ತೇನೆ” ಎಂದು ಹೇಳಿದರು.
“ಬಿಜೆಪಿ ನಾಯಕರು ನಿನ್ನೆ ನನ್ನ ಮನೆಗೆ ಬಂದಿದ್ದರು. ನನ್ನ ಮನವೊಲಿಸಲು ಪ್ರಯತ್ನಿಸಿದರು. ನನ್ನ ಕುಟುಂಬ ಸದಸ್ಯರ ಜೊತೆ ಚರ್ಚೆ ನಡೆಸಬೇಕಾಗಿದೆ. ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿದ್ದರು” ಎಂದು ಸದಾನಂದ ಗೌಡರು ತಿಳಿಸಿದರು.
ಕೆಲವು ತಿಂಗಳ ಹಿಂದೆ ಡಿ. ವಿ. ಸದಾನಂದ ಗೌಡರು ಮುಂದಿನ ಚುನಾವಣೆಗೆ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿ ಬಿಜೆಪಿ ನಾಯಕರಲ್ಲಿಯೇ ಅಚ್ಚರಿ ಮೂಡಿಸಿದ್ದರು. ಆದರೆ ಚುನಾವಣೆ ಸಮೀಪಿಸಿದಾಗ ಟಿಕೆಟ್ ಕೊಟ್ಟರೆ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು.
ಆದರೆ ಬಿಜೆಪಿ ಹೈಕಮಾಂಡ್ ನಾಯಕರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿರೋಧ ಎದುರಿಸುತ್ತಿದ್ದ ಶೋಭಾ ಕರಂದ್ಲಾಜೆಯನ್ನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿ ಎಂದು ಹೇಳಿತು.
ಇತ್ತ ಡಿ. ಕೆ. ಶಿವಕುಮಾರ್ ಟಿಕೆಟ್ ಕೈತಪ್ಪಿದ ಸದಾನಂದ ಗೌಡರನ್ನು ಸಂಪರ್ಕಿಸಿ ಕಾಂಗ್ರೆಸ್‌ಗೆ ಆಹ್ವಾನಿಸಿದರು. ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ ಮಾಡಿಕೊಂಡು ಅವರನ್ನು ಪಕ್ಷಕ್ಕೆ ಸೆಳೆಯಲು ಡಿ. ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಸಹ ಇನ್ನೂ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಸದಾನಂದ ಗೌಡರು ಒಪ್ಪಿಗೆ ನೀಡಿದರೆ ಅವರನ್ನೇ ಅಭ್ಯರ್ಥಿ ಮಾಡುವ ನಿರೀಕ್ಷೆ ಇದೆ. ಮಂಗಳವಾರ ಸದಾನಂದ ಗೌಡರು ನಡೆಸುವ ಪತ್ರಿಕಾಗೋಷ್ಠಿ ಮೇಲೆ ಈಗ ಎಲ್ಲರ ಕಣ್ಣು.