ಐದು IAS ಅಧಿಕಾರಿಗಳ ವರ್ಗಾವಣೆ ; ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ಪಕ್ಷಗಳು ಸಾಕಷ್ಟು ಕಸರತ್ತು ಮಾಡುತ್ತಿವೆ. ಯಾವ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ಇದೆಲ್ಲದರ ಮಧ್ಯೆ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ (transfer) ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
5 ಐಎಎಸ್ ಅಧಿಕಾರಿಗಳ ವರ್ಗಾವಣೆ
- ಡಾ. ಅಜಯ್ ನಾಗಭೂಷಣ್ ಎಂ.ಎನ್: ಕಾರ್ಯದರ್ಶಿ, ಪಶುಸಂಗೋಪನಾ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹುದ್ದೆ ಹೆಚ್ಚುವರಿ ಹೊಣೆ
- ತುಳಸ ಮದ್ದಿನೇನಿ: ಕಾರ್ಯದರ್ಶಿ, ಡಿಪಿಎಆರ್
- ಅರ್ಚನಾ ಎಂ.ಎಸ್: ಮುಖ್ಯ ಸಂಪಾದಕಿ, ಕರ್ನಾಟಕ ಗೆಜೆಟಿಯರ್ ಇಲಾಖೆ
- ಪ್ರಿಯಾಂಗ ಎಂ: ಎಂಡಿ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ
- ಭರತ್ ಎಸ್: ಸಿಇಒ, ಜಿ.ಪಂ. ಗದಗ ವರ್ಗಾವಣೆ ಮಾಡಲಾಗಿದೆ.
ಇತ್ತೀಚೆಗೆ 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಈ ಆದೇಶಕ್ಕೂ ಕೆಲವೇ ಕ್ಷಣಗಳ ಮುನ್ನ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.
ನಾಲ್ವರು ಐಪಿಎಸ್ ವರ್ಗಾವಣೆ
ಫೆಬ್ರುವರಿ 1 ರಂದು ಅಷ್ಟೇ ನಾಲ್ವರು ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅಮಿತ್ ಸಿಂಗ್, ಡಿಐಜಿಪಿ, ದಕ್ಷಿಣ ವಲಯ (ಮೈಸೂರು), ಡಾ.ಎಂ.ಬಿ.ಬೋರಲಿಂಗಯ್ಯ, ಡಿಐಜಿಪಿ, ಪಶ್ಚಿಮ ವಲಯ (ಮಂಗಳೂರು), ಶಿವಪ್ರಕಾಶ್ ದೇವರಾಜು, ಪೊಲೀಸ್ ವರಿಷ್ಠಾಧಿಕಾರಿ, (ಕಲಬುರಗಿ) ಮತ್ತು ಎ.ಶ್ರೀನಿವಾಸುಲು, ಡಿಸಿಪಿ, ಬೆಂಗಳೂರು ದಕ್ಷಿಣ ಸಂಚಾರ ವಿಭಾಗಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿತ್ತು.
ರಾಜ್ಯಸಭಾ ಸದಸ್ಯರಾಗಿ ಸುಧಾ ಮೂರ್ತಿ ಪ್ರಮಾಣ ವಚನ ಸ್ವೀಕಾರ
ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆ, ಹೆಸರಾಂತ ಲೇಖಕಿ ಸುಧಾ ಮೂರ್ತಿ ಗುರುವಾರ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಭಾಪತಿಗಳಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂಸತ್ ಭವನದ ತಮ್ಮ ಚೇಂಬರ್ನಲ್ಲಿ ಸುಧಾ ಮೂರ್ತಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಮನಿರ್ದೇಶನ ಮಾಡಿದ್ದರು. ಇಂದು ಸಂಸತ್ತಿನ ಮೇಲ್ಮನೆ ಸದಸ್ಯರಾಗಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್, ಸುಧಾ ಮೂರ್ತಿ ಅವರ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಕೂಡ ಉಪಸ್ಥಿತರಿದ್ದರು.
ಅನೇಕ ಸಮಾಜಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ 73 ವರ್ಷದ ಸುಧಾ ಮೂರ್ತಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 2006ರಲ್ಲಿ ಪದ್ಮಶ್ರೀ ಮತ್ತು 2023ರಲ್ಲಿ ಪದ್ಮಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ. ಅಲ್ಲದೇ, ತಮ್ಮ ‘ಗ್ರ್ಯಾಂಡ್ಪೆರೆಂಟ್ಸ್ ಬ್ಯಾಗ್ ಆಫ್ ಸ್ಟೋರಿಸ್’ಎಂಬ ಕಥಾ ಸಂಕಲನಕ್ಕೆ ಸುಧಾ ಮೂರ್ತಿ 2023ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಇ ಪದವಿ ಪಡೆದುಕೊಂಡಿರುವ ಸುಧಾ ಮೂರ್ತಿ, ದೇಶದ ಅತೀ ದೊಡ್ಡ ವಾಹನ ಉತ್ಪಾದಕ ಸಂಸ್ಥೆ ಟೆಲ್ಕೋ (ಟಾಟಾ ಎಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ)ಗೆ ನೇಮಕವಾದ ಮೊದಲ ಮಹಿಳಾ ಎಂಜಿನಿಯರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ನಂತರದಲ್ಲಿ ನಾರಾಯಣ ಮೂರ್ತಿ ಅವರಿಗೆ ಇನ್ಫೋಸಿಸ್ ಸಂಸ್ಥೆ ಆರಂಭಿಸುವಲ್ಲಿ ಆಧಾರಸ್ತಂಭವಾಗಿದ್ದು, ಇದನ್ನು ಸ್ಥಾಪನೆಯ ಸಮಯದಲ್ಲಿ ಅವರು ತಮ್ಮ ಉಳಿತಾಯದ 10,000 ರೂ.ಗಳನ್ನು ನೀಡಿದ್ದರು. ಬಳಿಕ ಇನ್ಫೋಸಿಸ್ ಫೌಂಡೇಶನ್ ಸಹ ಸ್ಥಾಪನೆ ಮಾಡಿದಾಗ ಅದರ ಟ್ರಸ್ಟಿಯಾಗಿ ಮುಂದುವರೆದಿದ್ದಾರೆ. 2021ರ ಡಿಸೆಂಬರ್ನಲ್ಲಿ ಈ ಫೌಂಡೇಶನ್ನ ಅಧ್ಯಕ್ಷರಾಗಿ ನಿವೃತ್ತರಾಗಿದ್ದರು.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪುತ್ರಿಯಾದ ಅಕ್ಷತಾ ಅವರು ಬ್ರಿಟನ್ನ ರಿಷಿ ಸುನಕ್ ಅವರನ್ನು ವಿವಾಹವಾಗಿದ್ದಾರೆ. ರಿಷಿ ಸುನಕ್ ಹಾಲಿ ಪ್ರಧಾನಿಯಾಗಿದ್ದಾರೆ. ಸುಧಾ ಮೂರ್ತಿ ಅವರ ಸೇವಾ ಕಾರ್ಯ ಗುರುತಿಸಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದವರ 12 ಜನರನ್ನು ರಾಜ್ಯಸಭೆಗೆ ನೇರವಾಗಿ ನಾಮನಿರ್ದೇಶನ ಮಾಡುವ ಅಧಿಕಾರವನ್ನು ರಾಷ್ಟ್ರಪತಿ ಹೊಂದಿದ್ದಾರೆ.
Hon'ble Vice-President of India and Chairman, Rajya Sabha, Shri Jagdeep Dhankhar administered oath to the newly nominated member of Rajya Sabha, Smt. Sudha Murty, in Parliament House today. #RajyaSabha pic.twitter.com/XZbXY4BJSY
— Vice President of India (@VPIndia) March 14, 2024