ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಲೆಗೆ ತೀವ್ರ ಪೆಟ್ಟು ; ಟ್ವೀಟರ್ ನಲ್ಲಿ ಫೋಟೋ ಟ್ವೀಟ್ ಮಾಡಿದ ಟಿಎಂಸಿ..!
ಪಶ್ಚಿಮ ಬಂಗಾಳ (West Bengal) ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಹಣೆಗೆ ಗಾಯವಾಗಿ ರಕ್ತಬರುತ್ತಿರುವ ಫೋಟೊವೊಂದನ್ನು ಟಿಎಂಸಿ (TMC) ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿದೆ. ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯಗಳಾಗಿವೆ. ನಿಮ್ಮ ಪ್ರಾರ್ಥನೆ ಇರಲಿ ಎಂದು ಟಿಎಂಸಿ ಟ್ವೀಟ್ ಮಾಡಿದೆ. ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ
ಮೂಲಗಳ ಪ್ರಕಾರ, ಅವರು ಮನೆಯಲ್ಲಿ ಬಿದ್ದಿದ್ದಾರೆ. ಕುಟುಂಬಸ್ಥರು, ಪಕ್ಷದ ಮುಖಂಡರು ಆಸ್ಪತ್ರೆಗೆ ಬರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿ, ಕೋಲ್ಕತ್ತಾ ಮೇಯರ್ ಆಗಮಿಸಿದ್ದಾರೆ. ಮಮತಾ ಬ್ಯಾನರ್ಜಿ ಈ ದಿನ ನಬಣ್ಣಗೆ ಹೋಗಿದ್ದರು. ಅಲ್ಲಿಂದ ಎಕ್ಡಾಲಿಯಾಗೆ ಹೋಗಿ ದಿವಂಗತ ಸುಬ್ರತಾ ಮುಖೋಪಾಧ್ಯಾಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆ ಬಳಿಕ ಮಮತಾ ಮನೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಪಕ್ಷದ ಮುಖ್ಯಸ್ಥರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹರೀಶ್ ಚಟರ್ಜಿ ಸ್ಟ್ರೀಟ್ ನಿವಾಸಕ್ಕೆ ಹಿಂತಿರುಗಿದಾಗ ಅಲ್ಲಿ ಜಾರಿಬಿದ್ದರು ಎಂದು ಟಿಎಂಸಿ ಮೂಲಗಳು ತಿಳಿಸಿವೆ. “ಮಮತಾ ತನ್ನ ಡ್ರಾಯಿಂಗ್ ರೂಮಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಜಾರಿ ಕೆಳಗೆ ಬಿದ್ದಿದ್ದಾರೆ. ಆಗ ಹಣೆಗೆ ಗಾಜಿನ ಶೋಕೇಸ್‌ಗೆ ಬಡಿದಿದೆ. ಇದು ಆಕೆಯ ಹಣೆಯ ಮೇಲೆ ಆಳವಾದ ಗಾಯ ಮತ್ತು ಅಪಾರ ರಕ್ತಸ್ರಾವಕ್ಕೆ ಕಾರಣವಾಯಿತು ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಆ ಘಟನೆ ನಡೆದಾಗ ಆಕೆಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಕೂಡ ಮನೆಯಲ್ಲಿದ್ದರು.
“ಮಮತಾ ಅವರಿಗೆ ಮನೆಯಲ್ಲಿ ಬಿದ್ದು ಗಾಯವಾಗಿದೆ. ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಫಿರ್ಹಾದ್ ಹಕೀಮ್ ಹೇಳಿದ್ದಾರೆ
Our chairperson @MamataOfficial sustained a major injury.
— All India Trinamool Congress (@AITCofficial) March 14, 2024
Please keep her in your prayers 🙏🏻 pic.twitter.com/gqLqWm1HwE