Arecanut Price : ದಿಢೀರ್ ಏರಿಕೆ ಕಂಡ ಅಡಿಕೆ ಧಾರಣೆ ; ಹೇಗಿದೆ ಮಾರುಕಟ್ಟೆ ದರ.!
ಮಂಗಳೂರು : ಕಳೆದ ಕೆಲವು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಮಂಗಳೂರು ಚಾಲಿ ಅಡಿಕೆ(Arecanur Price) ಈಗ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ಹೊರ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದ ಹಿಂದಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಕೆ.ಜಿ.ಗೆ 10 ರೂ., ಸಿಂಗಲ್ ಚೋಲ್ 15 ರೂ., ಡಬ್ಬಲ್ ಚೋಲ್ 20 ರೂ.ನಷ್ಟು ಹೆಚ್ಚಳ ಕಂಡಿದೆ. ದಿನದಿಂದ ದಿನಕ್ಕೆ ದರ ಏರಿಕೆಯತ್ತ ಮುಖ ಮಾಡಿದೆ. ಕ್ಯಾಂಪ್ಕೋ ಕೂಡ ಧಾರಣೆ ಏರಿಸುವಲ್ಲಿ ಉತ್ಸಾಹ ತೋರಿದೆ.
ಹೊರ ಮಾರುಕಟ್ಟೆಗೆ ಹೋಲಿಸಿ ದರೆ ಕ್ಯಾಂಪ್ಕೋದಲ್ಲಿ ಐದು ರೂ. ಕಡಿಮೆ ಇದೆ. ಕ್ಯಾಂಪ್ಕೋ ಮಾರು ಕಟ್ಟೆಯಲ್ಲಿ ಫೆ. 26ರಂದು ಹೊಸ ಅಡಿಕೆಗೆ 325-345 ರೂ., ಸಿಂಗಲ್ ಚೋಲ್‌ಗೆ 400 ರೂ.ನಿಂದ 410 ರೂ., ಡಬ್ಬಲ್ ಚೋಲ್ 400 ರೂ.ನಿಂದ 425 ರೂ. ತನಕ ಇತ್ತು. ಮಾ. 12ರಂದು ಹೊಸ ಅಡಿಕೆಗೆ 340-350 ರೂ., ಸಿಂಗಲ್ ಚೋಲ್‌ಗೆ 418 ರೂ.ನಿಂದ 420 ರೂ., ಡಬ್ಬಲ್ ಚೋಲ್ 430 ರೂ.ನಿಂದ 440 ರೂ. ತನಕ ಇತ್ತು. ಅಡಿಕೆಗೆ ಪ್ರಸ್ತುತ ಬೇಡಿಕೆ ಹೆಚ್ಚುತ್ತಿರುವುದರಿಂದ ಧಾರಣೆ ಇನ್ನಷ್ಟುಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾ.11ರಂದು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಸಿಪಿಸಿಆರ್‌ನಲ್ಲಿ ನಡೆದ ಕೃಷಿ ಮೇಳ ಕಾರ್ಯಕ್ರಮದಲ್ಲಿಮಾತನಾಡುತ್ತಾ, ವಿದೇಶದಿಂದ ಈಗ ಅಡಿಕೆ ಆಮದು ಮಾಡಲಾಗುತ್ತಿಲ್ಲಎಂದು ಸ್ಪಷ್ಟಪಡಿಸಿದ್ದರು. ಬರ್ಮಾ, ಭೂತಾನ್ ಕಡೆಯಿಂದ ಕಳಪೆ ಗುಣಮಟ್ಟದ ಅಡಿಕೆ ಆಮದಾಗುವ ಕಾರಣದಿಂದಲೇ ದೇಸೀ ಅಡಿಕೆ ಧಾರಣೆ ಕುಸಿಯುತ್ತಿದೆ ಎಂಬ ನೇರ ಆರೋಪಗಳು ರೈತ ಪರ ಸಂಘಟನೆಗಳಿಂದ ವ್ಯಕ್ತವಾಗುತ್ತಲೇ ಇದೆ.
ಅಡಿಕೆ ಆಮದು ನಿಲ್ಲಿಸುವಂತೆ ಕ್ಯಾಂಪ್ಕೊ ಸಂಸ್ಥೆಯು ಖುದ್ದು ಪ್ರಧಾನಿ ಮತ್ತು ಕೇಂದ್ರ ವಾಣಿಜ್ಯ ಸಚಿವರಿಗೆ ಪತ್ರ ಬರೆದಿದೆ ಎಂದು ಕೆಲ ದಿನಗಳ ಹಿಂದಷ್ಟೇ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದರು. ಅನಧಿಕೃತ ಅಡಿಕೆ ಒಳನುಸುಳುತ್ತಿರುವ ಪರಿಣಾಮದ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದರು.
ಇದೀಗ ಸಚಿವೆ ಶೋಭಾ ವಿಭಿನ್ನ ಹೇಳಿಕೆ ನೀಡಿದ್ದಾರೆ. 2021-22ರಲ್ಲಿಭೂತಾನ್‌ನಿಂದ ಅಡಿಕೆ ಆಮದಾಗಿದ್ದು ಬಿಟ್ಟರೆ ನಂತರ ಆಮದಾಗುತ್ತಿಲ್ಲ ಎಂದವರು ಹೇಳಿದ್ದಾರೆ. ಈ ತದ್ವಿರುದ್ಧತೆ ಈಗ ಅಡಿಕೆ ಬೆಳೆಗಾರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅಡಿಕೆ ಧಾರಣೆ ನಿಜಕ್ಕೂ ಯಾವ ಕಾರಣಕ್ಕಾಗಿ ಈ ಬಾರಿ ಕಡಿಮೆಯಾಗಿದೆ ಎಂಬ ಉತ್ತರ ಯಾರಿಗೂ ಸಿಕ್ಕಿಲ್ಲ.
ಆದರೂ ಈ ವಾರದಲ್ಲಿ ಅಡಿಕೆ ಧಾರಣೆ ಏರಿಕೆಯತ್ತ ಮುಖ ಮಾಡಿ ಬೆಳೆಗಾರರಲ್ಲಿ ಖುಷಿ ತಂದಿದೆ. ಇನ್ನು ಈ ದರ ಚುನಾವಣೆ ಬಳಿಕ ಎಷ್ಟು ಆಗಲಿದೆ ಎಂಬುದನ್ನು ಮುಂದಕ್ಕೆ ಕಾದು ನೋಡಬೇಕಿದೆ.