Yaduveer : ಮೈಸೂರ್ ಟಿಕೆಟ್ ಸಿಕ್ಕ ಬಳಿಕ ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ ಹೇಗಿತ್ತು.!
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸಲಿದ್ದಾರೆ. ಪ್ರತಾಪ್ ಸಿಂಹ ಅವರ ಬದಲಾಗಿ ಯದುವೀರ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟಿಕೆಟ್ ಕೈತಪ್ಪಿದ ಬಳಿಕ ಪ್ರತಿಕ್ರಿಯೆ ನೀಡಿರುವ ಹಾಲಿ ಸಂಸದ ಪ್ರತಾಪ್ ಸಿಂಹ, ಯದುವೀರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಟಿಕೆಟ್ ಸಿಕ್ಕಿದರೂ ಸಿಗದೇ ಇದ್ದರೂ ತಾನು ಮೋದಿಗಾಗಿ ಕೆಲಸ ಮಾಡುವುದಾಗಿ ಪ್ರತಾಪ್ ಸಿಂಹ ಈ ಮೊದಲು ಹೇಳಿದ್ದರು.
ಯದುವೀರ್ ಪ್ರತಿಕ್ರಿಯೆ
ತಮಗೆ ಟಿಕೆಟ್ ಸಿಕ್ಕ ಬಳಿಕ ಯದುವೀರ್ ಒಡೆಯರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದು, ಜನರ ಬೆಂಬಲ ಕೇಳಿದ್ದಾರೆ”ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷದಿಂದ ಅವಕಾಶ ನೀಡಲಾಗಿದೆ. ನಮ್ಮ ಪೂರ್ವಜರ ಮಹತ್ತರ ಕೊಡುಗೆಗಳಿಂದ ಕರ್ನಾಟಕ ಜನತೆಯ ಬೆಂಬಲ ಮತ್ತು ಭಾವನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ನಮ್ಮೊಟ್ಟಿಗಿದೆ. ಕಳೆದ ಒಂಭತ್ತು ವರ್ಷಗಳಿಂದ ನಾನು ನಮ್ಮ ಕ್ಷೇತ್ರದ ಹಾಗು ನಮ್ಮ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದು ಅನೇಕ ಪ್ರಜಾಬಾಂಧವರನ್ನು ಭೇಟಿಮಾಡುವ ಅವಕಾಶ ಸಿಕ್ಕಿದ್ದು, ನನ್ನನ್ನು ನೀವೆಲ್ಲರೂ ಮುಕ್ತವಾಗಿ ಒಬ್ಬ ಸ್ನೇಹಿತನಂತೆ ಸ್ವಾಗತಿಸಿ ಆತಿಥ್ಯವನ್ನು ನೀಡಿದ್ದೀರಿ, ಈಗ ಆ ಋಣವನ್ನು ತೀರಿಸಲು ಅವಕಾಶ ಕೇಳುತ್ತಿದ್ದೇನೆ.” ಎಂದು ಹೇಳಿದ್ದಾರೆ.
ಎಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಆಶಿಸುತ್ತಿದ್ದೇನೆ, ಹಾಗು ಮೈಸೂರು-ಕೊಡಗಿನ ಜನರ ಶುಭ ಹಾರೈಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಮೇಲೆ ನಂಬಿಕೆ ಇಟ್ಟು ಸ್ಪರ್ಧಿಸಲು ಅವಕಾಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ, ಬಿಎಸ್ ಯಡಿಯೂರಪ್ಪ, ಬಿ.ಎಲ್ ಸಂತೋಷ್ ಮತ್ತು ಬಿವೈ ವಿಜಯೇಂದ್ರ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ಬಿಜೆಪಿ ಕಾರ್ಯಕರ್ತರಿಗೆ ಕೂಡ ಧನ್ಯವಾದ ಸಲ್ಲಿಸಿದ್ದಾರೆ.
ಪ್ರತಾಪ್ ಸಿಂಹ ಅವರಿಗೂ ಅಭಿನಂದನೆ ಎರಡು ಬಾರಿ ಸಂಸದರಾಗಿ ಕೆಲಸ ಮಾಡಿರುವ ಪ್ರತಾಪ್ ಸಿಂಹ ಅವರಿಗೂ ಯದುವೀರ್ ಅಭಿನಂದನೆ ಸಲ್ಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ನಮ್ಮೆಲ್ಲರ ಭವಿಷ್ಯದ ಆಕಾಂಕ್ಷಿಗಳಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದೆ ಎಂದು ಹೇಳಿದ್ದಾರೆ.
Official statement from YKC Wadiyar 🙏 pic.twitter.com/TBsFfwXeuM
— ರವಿ ಕೀರ್ತಿ ಗೌಡ (@ravikeerthi22) March 13, 2024
ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ : ಪ್ರತಾಪ್ ಸಿಂಹ
ಯದುವೀರ್ ಒಡೆಯರ್ (Yaduveer Wadiyar) ಅವರಿಗೆ ಅಭಿನಂದನೆ ತಿಳಿಸಿ ಕೂಡಲೇ ಚುನಾವಣೆಗೆ ತಯಾರಿ ಆರಂಭಿಸೋಣ ಎಂದು ಮೈಸೂರಿನ ಹಾಲಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪೋಸ್ಟ್ ಪ್ರಕಟಿಸಿದ ಪ್ರತಾಪ್ ಸಿಂಹ, ಅಭಿನಂದನೆಗಳು ಮಹಾರಾಜ ಶ್ರೀ ಯದುವೀರ್. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ ದೇಶಕ್ಕಾಗಿ ಮೋದಿಗಾಗಿ ಎಂದು ಬರೆದಿದ್ದಾರೆ.
ಮಹಾರಾಜ ಯದುವೀರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದೆ. ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಎಲ್ಲರಿಗೂ ಧನ್ಯವಾದಗಳು. ನಾನು ಜನಸಂಘದ ದೀಪದ ಗುರುತಿನಲ್ಲಿ ಗೆದ್ದು ಪಂಚಾಯಿತಿ ಛೇರ್ಮನ್ ಆದ ವ್ಯಕ್ತಿಯ ಮಗ, ನಾನು ಸಾಯುವವರೆಗೂ ಮೋದಿ (PM Narendra Modi) ಭಕ್ತ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಪರ ಟಿಕೆಟ್ ನೀಡುವಂತೆ ಅಭಿಯಾನ ಸಹ ನಡೆದಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ.
ಮಹಾರಾಜ ಯದುವೀರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದೆ. ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಎಲ್ಲರಿಗೂ ಧನ್ಯವಾದಗಳು. pic.twitter.com/SauoRLQv0s
— Pratap Simha (Modi Ka Parivar) (@mepratap) March 13, 2024