ಕಡಬ: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಮತ್ತಿಬ್ಬರು ಪೊಲೀಸ್ ವಶಕ್ಕೆ.!
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ (Students) ಮೇಲೆ ನಡೆದ ಆ್ಯಸಿಡ್ ದಾಳಿ (Acid Attack) ಪ್ರಕರಣ ಸಂಬಂಧ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ್ಯಸಿಡ್ ದಾಳಿ ಸಂಬಂಧ ಮಾರ್ಚ್.5 ರಂದು ಪ್ರಮುಖ ಆರೋಪಿ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಭಿನ್ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಕೇರಳದ ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಉಪ್ಪಿನಂಗಡಿ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಆರೋಪಿ ಜೊತೆ ಕೇರಳಕ್ಕೆ ತೆರಳಿತ್ತು. ಎರ್ನಾಕುಲಂ ಮತ್ತು ತಮಿಳುನಾಡಿನ ಕೊಯಮತ್ತೂರಿನ ಪ್ರದೇಶಕ್ಕೆ ತೆರಳಿ ತನಿಖೆ ನಡೆಸಲಾಗಿತ್ತು. ಸದ್ಯ ಕೇರಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಕಡಬಕ್ಕೆ ಕರೆತಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಪಿ ಅಭಿನ್ಗೆ ಆ್ಯಸಿಡ್ ತಂದುಕೊಟ್ಟ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ನಡೆಸಿದ ದಿನ ಕಾಲೇಜಿನ ಸಮವಸ್ತ್ರ ಹೋಲುವ ಡ್ರೆಸ್ಸನ್ನು ಹೊಲಿದುಕೊಟ್ಟ ವ್ಯಕ್ತಿಯನ್ನೂ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಆನ್ಲೈನ್ ಮೂಲಕ ಆ್ಯಸಿಡ್ ಖರೀದಿಸಿದ್ದ ಎಂಬ ಅಂಶ ಪತ್ತೆಯಾಗಿದೆ.
ಮಾರ್ಚ್.05ರಂದು ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಆರೋಪಿ ಯುವಕ ಅಭಿನ್ ಪ್ಲ್ಯಾಸ್ಟಿಕ್ ಬಾಟಲ್ನಲ್ಲಿ ಆ್ಯಸಿಡ್ ತಂದು ಯುವತಿ ಮುಖಕ್ಕೆ ಎರಚಿದ್ದ. ಓರ್ವ ಯುವತಿ ಮುಖಕ್ಕೆ ಎರಚಲು ಹೋಗಿ ಪಕ್ಕದಲ್ಲೇ ಇದ್ದ ಇನ್ನಿಬ್ಬರು ವಿದ್ಯಾರ್ಥಿನಿಯರಿಗೂ ಗಾಯಗಳಾಗಿದ್ದವು. ಆ್ಯಸಿಡ್ ದಾಳಿಗೆ ಒಳಗಾದ ಮೂವರು ಪಿಯುಸಿ ವಿದ್ಯಾರ್ಥಿನಿಯರಿಗೆ ಮಂಗಳೂರು ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮೂವರಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಪ್ಲ್ಯಾಸ್ಟಿಕ್ ಸರ್ಜರಿ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆ್ಯಸಿಡ್ ದಾಳಿ ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ. ಮತ್ತು ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಸಂತ್ರಸ್ಥ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಾಗಿದ್ದು ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತನಾಡಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹೇಳಿದ್ದಾರೆ. ಒಟ್ಟಿನಲ್ಲಿ ಕಿರಾತಕನ ಹುಚ್ಚು ಪ್ರೇಮಕ್ಕೆ ವಿದ್ಯಾರ್ಥಿನಿಯರು ಇದೀಗ ಆ್ಯಸಿಡ್ ದಾಳಿಯಿಂದ ನರಳುವಂತಾಗಿದ್ದು ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.