ನಾಳೆ ನೂತನ ಚುನಾವಣಾ ಆಯುಕ್ತರ ಆಯ್ಕೆ..!
ನೂತನ ಚುನಾವಣಾ ಆಯುಕ್ತ(Election Commissioner)ರ ಆಯ್ಕೆಗಾಗಿ ಉನ್ನತಾಧಿಕಾರಿಗಳ ಸಭೆಯನ್ನು ಮಾರ್ಚ್ 14ರಂದು ನಡೆಯಲಿದೆ. ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ರಾಜೀನಾಮೆ ಹಾಗೂ ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ ಖಾಲಿ ಇರುವ ಎರಡು ಚುನಾವಣಾ ಆಯುಕ್ತರ ಹುದ್ದೆಯ ಭರ್ತಿ ಪ್ರಕ್ರಿಯೆ ಚುರುಕುಗೊಂಡಿದೆ. ಚುನಾವಣಾ ಆಯುಕ್ತರ ಆಯ್ಕೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಉನ್ನತ ಮಟ್ಟದ ಆಯ್ಕೆ ಮಂಡಳಿಯ ಸಭೆ ಇದೀಗ ಮಾರ್ಚ್ 14ರಂದು ನಿಗದಿಯಾಗಿದೆ.
ಮಾರ್ಚ್ 15ರಂದು ಸಂಜೆ 6 ಗಂಟೆಗೆ ಸಭೆ ನಡೆಯಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಈ ಮೊದಲು ಹೇಳಿದ್ದರು. ಆದರೆ ಈಗ ತ್ರಿಸದಸ್ಯ ಆಯ್ಕೆ ಸಮಿತಿಯ ಸಭೆ ಮಾರ್ಚ್ 14 ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎನ್ನಲಾಗಿದೆ.
ಮಾರ್ಚ್ 16ರಂದು ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ ಇಬ್ಬರು ಚುನಾವಣಾ ಆಧಿಕಾರಿಗಳ ಆಯ್ಕೆಯ ನಂತರ ಶೀಘ್ರವೇ ಪ್ರಮಾಣವಚನ ಬೋಧಿಸಲಾಗುತ್ತದೆ. ಮಾರ್ಚ್ 15 ಅಥವಾ 16 ರಂದು ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.
ಅರುಣ್ ಗೋಯಲ್ ರಾಜೀನಾಮೆ: 2024ರ ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಕೆಲ ದಿನಗಳ ಮೊದಲು ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಕೇಂದ್ರ ಕಾನೂನು ಸಚಿವಾಲಯವು ಅಧಿಸೂಚನೆಯನ್ನು ಪ್ರಕಟಿಸಿದೆ. ಇದರಿಂದಾಗಿ ಚುನಾವಣಾ ಆಯೋಗದ ಏಕೈಕ ಸದಸ್ಯರಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಉಳಿದಿದ್ದಾರೆ.