ನನ್ನ ಬಗ್ಗೆ ಮೋದಿ ಅವರಿಗೆ ಗೊತ್ತಿದೆ: ನನಗೆ ಮತ್ತೆ ಅವಕಾಶ ಸಿಗಲಿದೆ; ಪ್ರತಾಪ್ ಸಿಂಹ
ಪಕ್ಷ ನನ್ನನ್ನು ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆ ಇದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ಲೋಕಸಭೆ ಚುನಾವಣೆಗೆ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ (BJP) ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ ಅವರು ಪ್ರತಿಕ್ರಿಯೆ ನೀಡಿದರು. ಮೈಸೂರು ರಾಮೇಶ್ವರಂ ರೈಲಿಗೆ ಮೈಸೂರಿನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಮೇಲೆ ಪ್ರೀತಿ ಇಟ್ಟು ಇಲ್ಲಿಯ ಜನ ಗೆಲ್ಲಿಸಿದ್ದಕ್ಕೆ ಇಷ್ಟೆಲ್ಲ ಮಾಡಿದ್ದೇನೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದೇನೆ ಎಂದರು.
ನಾನು ಮೊದಲನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತಯಾಚನೆ ಮಾಡಿದ್ದೆ. ಎರಡನೇ ಬಾರಿ ಸ್ಪರ್ಧಿಸುವಾಗಲು ಮೋದಿ ಹೆಸರಿನಲ್ಲಿಯೇ ಸ್ಪರ್ಧಿಸಿದ್ದೆ. ಮೂರನೇ ಬಾರಿಯೂ ಮೋದಿ ಹೆಸರಿನಲ್ಲೇ ಚುನಾವಣೆ ಎದುರಿಸಿ ಜಯಗಳಿಸುತ್ತೇನೆ. ಪಕ್ಷದ ವಿಶ್ವಾಸ ನನ್ನ ಮೇಲಿದೆ. ನನಗೆ ಮತ್ತೆ ಅವಕಾಶ ಸಿಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ನಾನು ಏನೆಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿದೆ. ಸೋಲುವ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಹೊಡೆದಾಟ ನಡೆಯುತ್ತಿದೆ. ಬಿಜೆಪಿಯಲ್ಲಿ ಗೆಲುವಿನ ಪೈಪೋಟಿ ಇರಬಾರದು ಎಂದರೆ ಹೇಗೆ? ಗೆಲ್ಲುವ ಕುದುರೆ ಎಲ್ಲರೂ ಪ್ರಯತ್ನ ಮಾಡುತ್ತಿರುತ್ತಾರೆ. ಮೈಸೂರಿನಲ್ಲಿ ಬಿಜೆಪಿ ಗೆಲ್ಲುವಂತ ಪರಿಸ್ಥಿತಿಯನ್ನು ನಾನು ಸೃಷ್ಟಿ ಮಾಡಿದ್ದೇನೆ. ನನಗೆ ತಾಯಿ ಚಾಮುಂಡಿ, ಪ್ರಧಾನಿ ಮೋದಿ ಆಶೀರ್ವಾದವಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.