ದಿಢೀರ್ ರಾಜೀನಾಮೆ ಕೊಟ್ಟ ಚುನಾವಣಾ ಆಯುಕ್ತ ಅರುಣ್ ಗೋಯಲ್..!
ಅಚ್ಚರಿ ಮತ್ತು ಆಘಾತಕಾರಿ ಬೆಳವಣಿಗೆಯಲ್ಲಿ ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಅರುಣ್ ಗೋಯಲ್(Arun Goel) ಅವರು ಶನಿವಾರ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಚುನಾವಣಾ ಆಯೋಗದಲ್ಲಿ ಈಗಾಗಲೇ ಒಂದು ಪ್ರಮುಖ ಹುದ್ದೆ ಖಾಲಿ ಇದ್ದು, ಅರುಣ್ ಗೋಯಲ್ ಅವರ ರಾಜೀನಾಮೆಯಿಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಆಯೋಗದಲ್ಲಿ ಉಳಿದಂತಾಗಿದೆ.
ಅರುಣ್ ಗೋಯಲ್ ಅವರು ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿವಿಧ ರಾಜ್ಯಗಳಲ್ಲಿನ ತಯಾರಿಯ ಪರಿಶೀಲನೆಗಾಗಿ ಅವರು ನಿರಂತರ ಪ್ರವಾಸ ಕೈಗೊಂಡಿದ್ದರು. ಆದರೆ ಏಪ್ರಿಲ್- ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿದ್ದು, ಇದೇ ವಾರದ ಅಂತ್ಯದೊಳಗೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎನ್ನುವ ವರದಿಗಳ ನಡುವೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅವರ ದಿಢೀರ್ ರಾಜೀನಾಮೆ ಅಚ್ಚರಿಗೆ ಕಾರಣವಾಗಿದೆ.
“ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರೆ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿ ಅವಧಿ) ಕಾಯ್ದೆ 2023ರ ಸೆಕ್ಷನ್ 11ರ 1 ನೇ ಪರಿಚ್ಛೇದದ ಅಡಿಯಲ್ಲಿ, ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಸಲ್ಲಿಸಿರುವ ರಾಜೀನಾಮೆಯನ್ನು 2024ರ ಮಾರ್ಚ್ 9ರಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ಅವರು ಅಂಗೀಕರಿಸಿದ್ದಾರೆ” ಎಂದ ಗೆಜೆಟ್ ಅಧಿಸೂಚನೆ ತಿಳಿಸಿದೆ.
1985ನೇ ಬ್ಯಾಚ್ನ ಪಂಜಾಬ್ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಅರುಣ್ ಗೋಯಲ್ ಅವರು 2022ರ ನವೆಂಬರ್ 18ರಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಅದರ ಮರುದಿನವೇ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. 2022ರ ನವೆಂಬರ್ 21ರಂದು ಅವರು ಅಧಿಕಾರ ಸ್ವೀಕರಿಸಿದ್ದರು. ಅವರ ತರಾತುರಿಯ ನೇಮಕಾತಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಇಷ್ಟು ಅವಸರದ ತೀರ್ಮಾನಕ್ಕೆ ಕಾರಣವೇನು ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. 2027ರವರೆಗೂ ಅವರ ಅಧಿಕಾರಾವಧಿ ಇತ್ತು. ಗೋಯಲ್ ಅವರು ಈ ಹಿಂದೆ ಭಾರಿ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಗೋಯಲ್ ನೇಮಕಾತಿ ವಿರುದ್ಧದ ವಿಚಾರವನ್ನು ಸಾಂವಿಧಾನಿಕ ಪೀಠ ಪರಿಶೀಲನೆ ನಡೆಸಿತ್ತು. “ಅಂತಿಮಗೊಳಿಸಲಾದ ನಾಲ್ಕು ಹೆಸರುಳ ಪಟ್ಟಿಯನ್ನು ಕಾನೂನು ಸಚಿವಾಲಯ ಆಯ್ದುಕೊಂಡಿದೆ. ನವೆಂಬರ್ 18ರಂದು ಕಡತ ಸಿದ್ಧಪಡಿಸಿ, ಅದೇ ದಿನ ರವಾನಿಸಲಾಗಿದೆ. ಅದೇ ದಿನವೇ ಪ್ರಧಾನಿ ಕೂಡ ಹೆಸರನ್ನು ಶಿಫಾರಸುಗೊಳಿಸಿದ್ದಾರೆ. ಈ ಆವಸರ ಏಕೆ?” ಎಂದು ನ್ಯಾಯಪೀಠ ಪ್ರಶ್ನಿಸಿತ್ತು. ಆದರೆ ಗೋಯಲ್ ಅವರ ನೇಮಕಾತಿಯನ್ನು ರದ್ದುಗೊಳಿಸಲು ನಿರಾಕರಿಸಿದ್ದ ದ್ವಿಸದಸ್ಯ ಪೀಠ, ಕಳೆದ ವರ್ಷ ಅರ್ಜಿಯನ್ನು ವಜಾಗೊಳಿಸಿತ್ತು.
President accepts the resignation tendered by Arun Goel, Election Commissioner with effect from the 9th March 2024: Ministry of Law & Justice pic.twitter.com/88tuyXm4uP
— ANI (@ANI) March 9, 2024