ನಗರ ಪಾಲಿಕೆ ಮಾಜಿ ಸದಸ್ಯನ ಸಹೋದರನನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು..!
ಮೈಸೂರು ಮಹಾನಗರ ಪಾಲಿಕೆ ಮಾಜಿ ಕಾಂಗ್ರೆಸ್ ಸದಸ್ಯ ನಯಾಜ್ ಪಾಷಾ ಅಲಿಯಾಸ್ ಪಂಡು ಅವರ ಸಹೋದರ ಮೌಲಾನಾ ಅಕ್ಮಲ್ ಎಂಬಾತನನ್ನು ಶುಕ್ರವಾರ ರಾತ್ರಿ ನಗರದ ಉದಯಗಿರಿಯ ಮಾದೇಗೌಡ ವೃತ್ತ ಸಮೀಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ (Murder Case) ಘಟನೆಯ ಹಿನ್ನೆಲೆ ಬಯಲಾಗಿದೆ. ಇದು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಫ್ಲೆಕ್ಸ್ ವಿವಾದದಿಂದ ಸಂಭವಿಸಿದ ಕೊಲೆ ಎನ್ನಲಾಗಿದೆ.
ಕೊಲೆ ಸಂಬಂಧ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮೊಹಮ್ಮದ್ ಅಲ್ತಾಫ್ ಹಾಗೂ ಮೈಸೂರು ಪಾಲಿಸ ಸದಸ್ಯ ಬಷೀರ್ ಮೇಲೆ ಎಫ್ಐಆರ್ ದಾಖಲಾಗಿದೆ. ಅಲ್ತಾಫ್ ಅಭಿನಂದನಾ ಫ್ಲೆಕ್ಸ್ ಈ ಕೊಲೆಯ ಕೇಂದ್ರ ಬಿಂದು ಎನ್ನಲಾಗಿದೆ.
ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್ ಅಲ್ತಾಫ್ ಬಳಿಕ ಮೊದಲ ಬಾರಿ ಮೈಸೂರಿಗೆ ಆಗಮಿಸುವ ಹೊತ್ತಲ್ಲಿ ಸ್ವಾಗತ ಕೋರಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಮಹಾನಗರ ಪಾಲಿಕೆ ಸದಸ್ಯ ಮೊಹಮ್ಮದ್ ಬಶೀರ್ ಈ ಫ್ಲೆಕ್ಸ್ ಹಾಕಿಸಿದ್ದರು. ಇದಕ್ಕೆ ಸಂಬಂಧಿಸಿ ಕಳೆದ ನಾಲ್ಕು ದಿನಗಳಿಂದ ಗಲಾಟೆ ನಡೆಯುತ್ತಿತ್ತು.
ಅಲ್ತಾಫ್ಗೆ ಸ್ವಾಗತ ಕೋರಿ ಮೊಹಮ್ಮದ್ ಬಶೀರ್ ಫ್ಲೆಕ್ಸ್ ಅಳವಡಿಸಿದ್ದನ್ನು ಮೌಲಾನಾ ಅಕ್ಮಲ್ ಆಕ್ಷೇಪಿಸಿದ್ದ. ಮಾತ್ರವಲ್ಲ ಇದನ್ನು ಪ್ರಶ್ನೆ ಮಾಡಿ ಪಾಲಿಕೆಗೆ ದೂರು ಕೂಡಾ ನೀಡಿದ್ದ. ಇದರಿಂದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ನಡುವೆ ಅಕ್ಮಲ್ ಅಲ್ತಾಫ್ ಖಾನ್ ವಿರುದ್ಧ ವಿಡಿಯೊ ಮಾಡಿ ಹರಿಹಾಯ್ದಿದ್ದ. ಇದೆಲ್ಲದರ ಒಟ್ಟು ಪರಿಣಾಮವಾಗಿ ಬಶೀರ್ ಮತ್ತು ಅಕ್ಮಲ್ ಟೀಮ್ಗಳ ನಡುವೆ ಜಿದ್ದಾಜಿದ್ದಿ ನಡೆದಿತ್ತು.