ರಷ್ಯಾ - ಉಕ್ರೇನ್ ಯುದ್ಧದಲ್ಲಿ ಭಾರತೀಯ ಯುವಕ ಸಾವು ; ವಂಚನೆಗೊಳಗಾಗಿ ಸೇನೆಗೆ ಸೇರಿದ್ದ ಯುವಕ..!
ನವದೆಹಲಿ: ರಷ್ಯಾ-ಉಕ್ರೇನ್ (Russia-Ukraine War) ಯುದ್ಧದಲ್ಲಿ ಮತ್ತೋರ್ವ ಭಾರತೀಯ (Indian Death) ಸಾವನ್ನಪ್ಪಿದ್ದು, ತೆಲಂಗಾಣ ಮೂಲದ ಮಹಮದ್ ಅಸ್ಫಾನ್ (Mohammed Asfan) ಉಕ್ರೇನ್ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರವಾಸ, ಉದ್ಯೋಗ ಅರಸಿ ರಷ್ಯಾಗೆ (Russia) ತೆರಳಿರುವ ಭಾರತದ ಯುವಕರನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದು, ಇದರಿಂದ ಭಾರತದ ಯುವಕರು ಪ್ರಾಣ ಕಳೆದಕೊಳ್ಳುವಂತಾಗಿದೆ. ಇದೇ ರೀತಿ ತೆಲಂಗಾಣದ ಮೊಹಮ್ಮದ್ ಅಸ್ಫಾನ್ (30 ವರ್ಷ) ಎಂಬ ಯುವಕ ಉದ್ಯೋಗ ಅರಸಿ ರಷ್ಯಾ ತೆರಳಿದ್ದರು. ಆದರೆ, ಅಲ್ಲಿ ಅವರಿಗೆ ಉದ್ಯೋಗ ನೀಡುವುದಾಗಿ ಹೇಳಿ ರಷ್ಯಾ ಸೇನೆಯ ವ್ಯಾಗ್ನರ್ ಗ್ರೂಪ್ ಗೆ ಸೇರಿಸಿ ಮೋಸ ಮಾಡಲಾಗಿತ್ತು. ಇದೀಗ ಸಂಘರ್ಷದಲ್ಲಿ ಅವರು ಮೃತಪಟ್ಟಿದ್ದಾರೆ.
ಮೊಹಮ್ಮದ್ ಅಸ್ಫಾನ್ ಸಾವಿನ ಕುರಿತು ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಯೇ ಮಾಹಿತಿ ನೀಡಿದ್ದು, ಈತನು ಕೂಡ ರಷ್ಯಾ ಅಧಿಕಾರಿಗಳ ಬಲವಂತದಿಂದ ಸೇನೆ ಸೇರಿದ್ದ ಎಂದು ತಿಳಿದುಬಂದಿದೆ.“ಭಾರತದ ಮೊಹಮ್ಮದ್ ಅಸ್ಫಾನ್ ಅವರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರಷ್ಯಾದ ಅಧಿಕಾರಿಗಳು ಹಾಗೂ ಮೊಹಮ್ಮದ್ ಅಸ್ಫಾನ್ ಅವರ ಕುಟುಂಬಸ್ಥರ ಜತೆ ಸಂಪರ್ಕದಲ್ಲಿದ್ದೇವೆ. ಮೊಹಮ್ಮದ್ ಅಸ್ಫಾನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ” ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನವಿ ಮಾಡಿದ್ದ ಕುಟುಂಬ
ಕೆಲ ದಿನಗಳ ಹಿಂದಷ್ಟೇ ರಷ್ಯಾದಲ್ಲಿ ಮೊಹಮ್ಮದ್ ಅಸ್ಫಾನ್ ಸಂಕಷ್ಟಕ್ಕೆ ಸಿಲುಕಿರುವ ಕುರಿತು ಆತನ ಕುಟುಂಬಸ್ಥರು ರಕ್ಷಣೆಗಾಗಿ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದರು. ಕೆಲಸ ಮಾಡಲೆಂದು ರಷ್ಯಾಗೆ ತೆರಳಿದ ಮೊಹಮ್ಮದ್ ಅಸ್ಫಾನ್ನನ್ನು ಬಲವಂತವಾಗಿ ಸೇನೆಗೆ ಸೇರಿಸಲಾಗಿದೆ. ಆತನು ಸಂಕಷ್ಟಕ್ಕೆ ಸಿಲುಕಿದ್ದು, ದಯಮಾಡಿ ರಕ್ಷಿಸಿ ಎಂದು ಕುಟುಂಬಸ್ಥರು ಕೋರಿದ್ದರು. ಭಾರತದ ವಿದೇಶಾಂಗ ಸಚಿವಾಲಯವೂ ಭಾರತೀಯರ ರಕ್ಷಣೆಯ ಭರವಸೆ ನೀಡಿತ್ತು. ಇದಕ್ಕೂ ಮೊದಲೇ ಮೊಹಮ್ಮದ್ ಅಸ್ಫಾನ್ ಯುದ್ಧದಲ್ಲಿ ಬಲಿಯಾಗಿದ್ದಾನೆ