ಉಳ್ಳಾಲ: ಕೊಂಡಾಣ ಕ್ಷೇತ್ರದ ನಿರ್ಮಾಣ ಹಂತದ ನೂತನ ಭಂಡಾರ ಮನೆ ರಾತ್ರೋರಾತ್ರಿ ಧ್ವಂಸ!

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನಕ್ಕೆ ನೂತನವಾಗಿ ನಿರ್ಮಿಸುತ್ತಿದ್ದ ನೂತನ ಭಂಡಾರಮನೆಯನ್ನು ಕಿಡಿಗೇಡಿಗಳು ಸಂಪೂರ್ಣ ಧ್ವಂಸ (Temple demolition) ಮಾಡಿದ್ದಾರೆ.
ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ, ಬಂಟ, ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ಕಟ್ಟಡವನ್ನು ಜೆಸಿಬಿ ಮೂಲಕ ರಾತ್ರೋರಾತ್ರಿ ಕೆಡವಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿ ವಿವಾದದ ಸಂಘರ್ಷದಲ್ಲಿ ಕಟ್ಟಡ ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ಬಣಗಳ ಗುದ್ದಾಟದಲ್ಲಿ ದೈವಸ್ಥಾನಕ್ಕೆ ಸೇರಿದ ಕಟ್ಟಡ ಧ್ವಂಸ ಮಾಡಿರುವ ಅನುಮಾನ ಮೂಡಿಸಿದೆ. ಸ್ಥಳಕ್ಕೆ ತಹಸೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಪೊಲೀಸರು ಸೇರಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ. ಸದ್ಯ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಅವರು ಈ ಸಂಬಂಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಕೊಂಡಾಣ ದೈವಸ್ಥಾನವು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದೆ. ಅದರಲ್ಲಿ ಕ್ಷೇತ್ರದ ದೈವಗಳ ಹದಿನೈದು ಕೋಟಿಗೂ ಹೆಚ್ಚಿನ ಬೆಲೆಬಾಳುವ ಒಡವೆಗಳಿವೆ. ಆದರೆ ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹಲವರಿಂದ ಯತ್ನಿಸಲಾಗುತ್ತಿದೆ. ಆದರೆ ಇದಕ್ಕೆ ಖಾಸಗಿ ಭಂಡಾರ ಮನೆಯವರು ಸಮ್ಮತಿ ನೀಡಿರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವ್ಯವಸ್ಥಾಪನಾ ಸಮಿತಿಯು ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ದೈವಸ್ಥಾನದ ಪಕ್ಕದ ಜಾಗದಲ್ಲಿ ಕಳೆದ ಜನವರಿ 8ರಂದು ನೂತನ ಭಂಡಾರ ಮನೆ ಶಿಲನ್ಯಾಸ ಮಾಡಲಾಗಿತ್ತು. ಆಗಿನ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಮುಂದಾಳತ್ವದಲ್ಲಿ ಶಿಲಾನ್ಯಾಸ ನಡೆದಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿತ್ತು.
ಈ ಮಧ್ಯೆ ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಧಿಕಾರವನ್ನು ಹಸ್ತಾಂತರ ಮಾಡಲಾಗಿತ್ತು. ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಎರಡು ದಿವಸಗಳ ಹಿಂದಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರಿಸಿದ್ದರು. ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆಯನ್ನು ನೆಲಸಮ ಮಾಡಿದ್ದಾರೆ.
ಘಟನೆ ಬೆನ್ನಲ್ಲೇ ಎರಡು ಬಣಗಳ ನಡುವೆ ಸಂಘರ್ಷ ತಾರಕಕ್ಕೆ ಏರಿದೆ. ಕಾರ್ಣಿಕ ದೈವದ ಕೋಟ್ಯಾಂತರ ರೂ. ಒಡವೆಗಳ ಅಧಿಪತ್ಯಕ್ಕಾಗಿ ಈ ಸಂಘರ್ಷ ನಡೆಯುತ್ತಿದೆ. ನೂರಾರು ವರ್ಷಗಳಿಂದ ದೇವರ ಒಡವೆಗಳು ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಇದೆ. ದೈವಗಳ ಸಮ್ಮುಖದಲ್ಲಿ ಬಗೆ ಹರಿಯಬೇಕಾದ ವಿವಾದ ಪೊಲೀಸ್ ಠಾಣೆ ಅಂಗಳಕ್ಕೆ ತಲುಪಿದೆ.