ಅಡುಗೆ ಎಣ್ಣೆಯ ದರ ಏರಿಕೆ ಬೆನ್ನಲ್ಲೇ ಚಿಕನ್ ದರ ಏರಿಕೆ ; ಏಕಾಏಕಿ ಏರಿಕೆಗೆ ಕಾರಣವೇನು?
ಈ ಬಾರಿ ನಿರೀಕ್ಷೆಗೂ ಮೀರಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ತಾಪಮಾನ ಏರಿಕೆಯ ಪರಿಣಾಮ ಜೋರಾಗಿದೆ. ರಾಜ್ಯದಲ್ಲಿ ನೀರಿನ ಕೊರೆತೆ ಹೆಚ್ಚಾಗುತ್ತಿದ್ದು, ಬಿರು ಬಿಸಿಲಿಗೆ ಜನ ತತ್ತರಿಸಿದ್ದಾರೆ. ಒಂದೆಡೆ ಜಾನುವಾರು, ಪಕ್ಷಿಗಳಿಗೂ ಕುಡಿಯುವ ನೀರಿನ ಕೊರೆತೆ ಉಂಟಾಗುತ್ತಿದ್ದು, ಮತ್ತೊಂದೆಡೆ ಬಿಸಿಲಿನ ತಾಪಕ್ಕೆ ಪ್ರಾಣಿ-ಪಕ್ಷಿಗಳು ಸಾವನ್ನಪ್ಪುತ್ತಿದೆ.
ತಾಪಮಾನ ಏರಿಕೆಯ ಪರಿಣಾಮ ಕುಕ್ಕಟೋದ್ಯಮಕ್ಕೂ ತಟ್ಟಿದ್ದು, ಫೌಲ್ಟ್ರಿ ಫಾರಂನಲ್ಲಿ ಕೋಳಿಗಳು ಸಾವನ್ನಪ್ಪುತ್ತಿದೆ. ಬಿಸಿಲ ತಾಪಕ್ಕೆ ಕೋಳಿ ಬೆಳವಣಿಗೆ ಕುಂಠಿತ, ಮರಣ ಪ್ರಮಾಣ ಹೆಚ್ಚಳವಾಗುತ್ತಿದೆ. ಹೀಗಾಗಿ ಕೋಳಿ ಮಾಂಸ ಉತ್ಪಾದನೆ ಕುಸಿದಿದ್ದು, ಚಿಕನ್ ದರ ಏಕಾಏಕಿ ಏರಿಕೆಯಾಗಿದೆ. ಕೋಳಿ ಮಾಂಸದ ದರ ಒಂದೇ ವಾರದಲ್ಲಿ ಕೆಜಿಗೆ ಈವತ್ತರಿಂದ ಎಪ್ಪತು ರೂಪಾಯಿ ಏರಿಕೆಯಾಗಿದೆ.
ಜೊತೆಗೆ ಕೋಳಿಗಳಿಗೆ ಬಿಸಿಲಿನ ಝಳ ಹಾಗೂ ಸೆಕೆ ತಾಳಲಾರದೆ ಸಾವನ್ನಪ್ಪುತ್ತದೆ. ಬೇಸಿಗೆಯಲ್ಲಿ ಐಬಿಎಚ್ ಸೋಂಕು ತಗುಲುವುದರಿಂದ, ರೋಗ ನಿರೋಧಕ ಶಕ್ತಿ ಕುಂದುತ್ತದೆ. ಹೀಗಾಗಿ ಬೇಡಿಕೆ ಇರುವಷ್ಟು ಕೋಳಿ ಮಾಂಸ ಉತ್ಪಾದನೆ ಇಲ್ಲ. ಆದರೆ ಕೋಳಿ ಮಾಂಸದ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಕಳೆದ ಒಂದು ತಿಂಗಳಲ್ಲಿ ಅನೇಕ ಬಾರಿ ಕೋಳಿ ದರ ಏರಿಕೆಯಾಗಿದ್ದು, ಒಂದು ವಾರದ ಹಿಂದೆ 180 ರೂಪಾಯಿ ಇದ್ದ ಒಂದು ಕೆಜಿ ಕೋಳಿ ಮಾಂಸದ ಬೆಲೆ 250 ರೂಪಾಯಿಗೆ ತಲುಪಿದೆ. ಇನ್ನು ಜಿಲ್ಲೆಗಳಿಗೆ ಅನುಗುಣವಾಗಿ ಬೆಲೆಯಲ್ಲಿ ಏರಿಳಿತ ಬದಲಾವಣೆಗಳಿದೆ.
ಪ್ರಸ್ತುತ ಕೋಳಿ ಮರಿ ದರ 50 ರೂಪಾಯಿ ನಿಗದಿಯಾಗಿದ್ದು, ಉತ್ಪಾದನಾ ವೆಚ್ಚ ನೂರರ ಗಡಿ ದಾಟಿದೆ. ಒಂದು ಕೆಜಿ ತೂಕದ ಕೋಳಿ ಬೆಳೆಸಲು 130ರಿಂದ 140 ರೂಪಾಯಿ ಖರ್ಚಾಗುತ್ತಿದ್ದು, ಸದ್ಯ ಕೋಳಿ ಮಾಂಸದ ದರ ಇನ್ನೂರೈವತ್ತರ ಗಡಿ ದಾಟಿ ಸಾಗುತ್ತಿದೆ.