ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ; ಶಂಕಿತನ ಚಹರೆ ಸಿಸಿಟಿವಿಯಲ್ಲಿ ಪತ್ತೆ..!
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಯ ಚಹರೆಯನ್ನು ಪತ್ತೆ ಹಚ್ಚಲಾಗಿದೆ. ಶುಕ್ರವಾರ ಮುಖಕ್ಕೆ ಮಾಸ್ಕ್, ಕಣ್ಣಿಗೆ ಕಪ್ಪು ಕನ್ನಡಕ, ತಲೆಗೆ ಕ್ಯಾಪ್ ಧರಿಸಿ ಬಂದಿದ್ದ ವ್ಯಕ್ತಿಯೇ ಸ್ಫೋಟಕ ವಸ್ತು ಸಮೇತ ಬ್ಯಾಗ್ ಇರಿಸಿದ್ದ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಉಪಹಾರ ಗೃಹದಲ್ಲಿ ರವೆ ಇಡ್ಲಿ ತಿಂದಿರುವ ಆರೋಪಿ ನಂತರ ಬ್ಯಾಗ್ ಇಟ್ಟು ತೆರಳಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಪೊಲೀಸ್ ತಂಡಗಳು ಇದೇ ವ್ಯಕ್ತಿಯ ಚಹರೆಯ ಬೆನ್ನುಹತ್ತಿವೆ. ಕೃತ್ಯಕ್ಕೂ ಮುನ್ನ ಮತ್ತು ನಂತರ ಆರೋಪಿ ವೈಟ್ ಫೀಲ್ಡ್, ಮಾರತ್ಹಳ್ಳಿ ಭಾಗದಲ್ಲಿ ಓಡಾಡಿರುವುದು ಪತ್ತೆಯಾಗಿದ್ದು, ಮುಂಜಾನೆ 3 ಗಂಟೆವರೆಗೂ ಪೊಲೀಸರು ತಲಾಶ್ ನಡೆಸಿದ್ದಾರೆ.
#WATCH | A team of FSL, Bomb Disposal Squad and Dog Squad conducts an investigation at the explosion site at The Rameshwaram Cafe in Bengaluru’s Whitefield area. pic.twitter.com/iJf7rVvcwN
— ANI (@ANI) March 2, 2024
ಪ್ರಕರಣದ ಆರೋಪಿಗಾಗಿ ಅನ್ಯ ರಾಜ್ಯಗಳಲ್ಲಿಯೂ ಹುಡುಕಾಟ ಆರಂಭಿಸಲಾಗಿದೆ. ಪಕ್ಕದ ಕೇರಳ, ತಮಿಳುನಾಡಿಗೂ ಸಹ ತಂಡಗಳು ತೆರಳಿರುವುದಾಗಿ ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಸಿಸಿಬಿ ವಿಶೇಷ ತಂಡಗಳಿಂದ ಆರೋಪಿಗಾಗಿ ಹುಡುಕಾಟ ಮುಂದುವರೆದಿದ್ದು, ಉಪಹಾರ ಗೃಹದಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿರುವ ಶಂಕಿತ ಆರೋಪಿಯನ್ನು ಹೋಲುವ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವೈಟ್ ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಎಫ್ಎಸ್ಎಲ್, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ತಂಡಗಳು ತನಿಖೆ ಮುಂದುವರೆಸಿವೆ.
#WATCH | Karnataka: A team of NSG, Bomb Disposal Squad and Local police conduct an investigation at the explosion site at The Rameshwaram Cafe in Bengaluru’s Whitefield area. pic.twitter.com/ISaCfTu3Ay
— ANI (@ANI) March 2, 2024
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ. ಇದೊಂದು ಭದ್ರತಾ ವಿಷಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಮಾಧ್ಯಮದವರು ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಎಕ್ಸ್ (ಟ್ವಿಟ್ಟರ್)ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸ್ಫೋಟದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, “ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಬಗ್ಗೆ ತನಿಖೆಗೆ ನಾವು ಹಲವು ತಂಡಗಳನ್ನು ರಚಿಸಿದ್ದೇವೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳಿಂದ ಕೆಲವು ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಸ್ಫೋಟ ಸಂಭವಿಸಿದ ಸಂದರ್ಭ ಆ ಮಾರ್ಗದಲ್ಲಿ ಬಿಎಂಟಿಸಿ ಬಸ್ ಚಲಿಸಿದೆ. ಆರೋಪಿ ಬಸ್ನಲ್ಲಿ ಬಂದಿರುವ ಬಗ್ಗೆ ನಮಗೆ ಮಾಹಿತಿ ಇದೆ. ಆದಷ್ಟು ಬೇಗ ಬಂಧಿಸುತ್ತೇವೆ. ಆ ನಿಟ್ಟಿನಲ್ಲಿ ನಮ್ಮ ತಂಡವು ವೇಗವಾಗಿ ಕೆಲಸ ಮಾಡುತ್ತಿದೆ. ಸ್ಫೋಟಕ್ಕೆ ಟೈಮರ್ ಬಳಸಲಾಗಿದ್ದು, ಎಫ್ಎಸ್ಎಲ್ ತಂಡ ಘಟನಾ ಸ್ಥಳದಲ್ಲಿ ತನಿಖೆ ಮಾಡುತ್ತಿದೆ. ಕೆಫೆ ಸ್ಫೋಟದ ಬಗ್ಗೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ಇದೆ.” ಎಂದು ತಿಳಿಸಿದ್ದಾರೆ.
On the explosion at Bengaluru’s The Rameshwaram Cafe, Karnataka Home Minister Dr G Parameshwara says "We have constituted several teams. We have collected some evidence from CCTV footage. When the explosion took place, a BMTC bus moved on that way. We have information that he… pic.twitter.com/WP1yxuKwb6
— ANI (@ANI) March 2, 2024