ಮಂಗಳೂರು: ಒಂದು ತಿಂಗಳೊಳಗೆ ಬಸ್‌ಗಳಿಗೆ ಬಾಗಿಲು ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ..!
2017 ರಿಂದ ನೋಂದಣಿಯಾಗಿರುವ ಎಲ್ಲಾ ಸಾರ್ವಜನಿಕ ಬಸ್‌ಗಳು ಮುಂದಿನ ಒಂದು ತಿಂಗಳೊಳಗೆ ಬಾಗಿಲನ್ನು ಅಳವಡಿಸಿ ಅಫಿಡವಿಟ್ ಸಲ್ಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮುಲ್ಲೈ ಮುಗಿಲನ್ ಮಾತನಾಡಿದರು. 2017 ರಿಂದ ನೋಂದಣಿಯಾಗುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ ಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ಒಂದು ತಿಂಗಳೊಳಗೆ ಈ ಕಾನೂನು ಅನ್ನು ಜಾರಿಗೆ ತಂದು ಬಸ್ ಮಾಲೀಕರು ಇದರ ಅಫಿಡವಿಟ್ ಸಲ್ಲಿಸಬೇಕು ಎಂದು ಆರ್‌ಟಿಓಗೆ ನಿರ್ದೇಶಿಸಿದರು.
ಸಾರ್ವಜನಿಕರ ಜೀವ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇದರಲ್ಲಿ ನಿರ್ಲಕ್ಷ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಸ್‌ಗಳಲ್ಲಿ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರಿಂದಲೂ ತೀವ್ರ ಒತ್ತಡ ಬರುತ್ತಿದೆ. ಜನ ಸಂಪರ್ಕ ಸಭೆಗಳಲ್ಲಿಯೂ ಮನವಿಗಳು ಬಂದಿವೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಬಸ್‌ಗಳಲ್ಲಿ ಬಾಗಿಲು ಅಳವಡಿಸಿ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿಯೂ ಸಿಟಿ ಬಸ್‌ಗಳಲ್ಲಿ ಬಾಗಿಲು ಇರುವುದರಿಂದ ಸಾರ್ವಜನಿಕರ ಸಂಚಾರ ನಿರಾತಂಕವಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯೂ ಸುಗಮವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಈ ಕಾನೂನು ಅನ್ನು ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಫ್ಲೈಓವರ್ ಕತ್ತಲು; ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಸುರತ್ಕಲ್, ಕೂಳೂರು, ಕೊಟ್ಟಾರಚೌಕಿ, ಕುಂಟಿಕಾನ, ಪಂಪ್‌ವೆಲ್ ಮೇಲ್ಸೇತುವೆಗಳಲ್ಲಿ ದಾರಿದೀಪದ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಕತ್ತಲು ಆವರಿಸಿರುವ ಬಗ್ಗೆ ಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಿಂದ ಈ ಸಮಸ್ಯೆ ಇದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆಯೊಂದಿಗೂ ವ್ಯವಹರಿಸಿಲ್ಲ. ಇದರಿಂದ ಹಲವಾರು ಅಪಘಾತಗಳು ಸಂಭವಿಸಿ, ಜೀವಹಾನಿಯಾಗಿರುವ ಘಟನೆಗಳು ನಡೆದಿವೆ. ಹೆದ್ದಾರಿಯ ಮೂಲ ಯೋಜನೆಯಲ್ಲಿಯೇ ಇದನ್ನು ಯಾಕೆ ಸೇರಿಸಿಲ್ಲ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯ ಹಲವೆಡೆ ವಿವಿಧ ಕಾಮಗಾರಿಗಳಿಗಾಗಿ ಕೆಲವು ಏಜನ್ಸಿಗಳು ಅನುಮತಿ ಇಲ್ಲದೆ ಲೋಕೋಪಯೋಗಿ ರಸ್ತೆಗಳನ್ನು ಅಗೆದು, ಪೈಪ್, ಕೇಬಲ್ ಅಳವಡಿಸಿರುವ ಬಗ್ಗೆ ದೂರುಗಳು ಬಂದಿದ್ದು, ಕೂಡಲೇ ಅಂತಹವರಿಗೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲು ಮುಲ್ಲೈ ಮುಗಿಲನ್ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.