KAS Recruitment 2024: 384 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ
ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ಗೆಜೆಟೆಡ್ ಪ್ರೊಬೇಷನರ್ 2023-24ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರಿಯ (ಕೆಎಎಸ್) (KAS Recruitment 2024) ಗ್ರೂಪ್ “ಎ” ಮತ್ತು ಗ್ರೂಪ್ “ಬಿ” ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೈದರಾಬಾದ್ ಕರ್ನಾಟಕ ಹಾಗೂ ಉಳಿಕೆ ವೃಂದಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಒಟ್ಟು 384 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸುಮಾರು ಆರು ವರ್ಷಗಳ ನಂತರ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
2024ರ ಮಾರ್ಚ್ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಏಪ್ರಿಲ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸದ್ಯ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು (ತಾತ್ಕಾಲಿಕ) ಪ್ರಕಟ ಮಾಡಲಾಗಿದ್ದು, 2024ರ ಮೇ 5ರಂದು ಪರೀಕ್ಷೆ ನಡೆಯಲಿದೆ. ಈ ಬಾರಿ ಮಾತ್ರ ವಯೋಮಿತಿಯಲ್ಲಿ ಮೂರು ವರ್ಷ ಹೆಚ್ಚಳ ಮಾಡಲಾಗಿದೆ. ಕನಿಷ್ಠ 21 ವರ್ಷವಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 38 (ಮೂರು ವರ್ಷ ಹೆಚ್ಚಳ), ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 41 ವರ್ಷ, ಎಸ್‌ಸಿ, ಎಸ್‌ಟಿ ಪ್ರವರ್ಗ 1ಕ್ಕೆ 43 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಸಂದರ್ಶನ ನಡೆಯಲಿದೆ
ಪೂರ್ವಭಾವಿ ಪರೀಕ್ಷೆ ಬಳಿಕ ಮುಖ್ಯ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರು ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ.
ಆಯ್ಕೆ ಪ್ರಕ್ರಿಯೆಗೆ ನಿಗದಿಪಡಿಸಿರುವ ಕಾಲಮಿತಿ :
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 04-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-04-2024
ಪೂರ್ವಭಾವಿ ಪರೀಕ್ಷಾ ದಿನಾಂಕ (ತಾತ್ಕಾಲಿಕ): 05-05-2024
ಸಮಸ್ಯೆಯಾದರೆ ಈ ಸಹಾಯವಾಣಿಗೆ ಕರೆ ಮಾಡಿ
ಅರ್ಜಿ ಸಲ್ಲಿಸಲು ಸಮಸ್ಯೆಗಳು ಎದುರಾದಲ್ಲಿ ಹೆಲ್ಪ್‌ಲೈನ್ ನಂಬರ್ ನೀಡಲಾಗಿದ್ದು, 080-30574957 / 30574901 ಗೆ ಕರೆ ಮಾಡಲು ಸೂಚಿಸಲಾಗಿದೆ.
ತಪ್ಪು ಸರಿಪಡಿಸಲು ಕೊನೇ ಅವಕಾಶ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿಳಾಸ, ಪ್ರವರ್ಗ, ತಂದೆ-ತಾಯಿ ಹೆಸರು, ವಿದ್ಯಾರ್ಹತೆ ಮುಂತಾದ ವಿಷಯಗಳನ್ನು ತಪ್ಪಾಗಿ ನಮೂದಿಸಿರುವುದಾಗಿ 302 ಸದರಿ ಮಾಹಿತಿಗಳನ್ನು ಬದಲಾವಣೆ ಮಾಡುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗಕ್ಕೆ ಒಂದು ಬಾರಿ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಿದ ನಂತರ ಸದರಿ ಅರ್ಜಿಯಲ್ಲಿನ ಮಾಹಿತಿಗಳನ್ನು ಆಯೋಗದ ಅಧಿಕಾರಿ/ಸಿಬ್ಬಂದಿಗೆ ತಂತ್ರಾಂಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿರದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳೇ ನೇರವಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಮಾಹಿತಿಗಳನ್ನು ಸರಿಪಡಿಸಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ ತದನಂತರ ಸಲ್ಲಿಸಲಾಗುವ ಯಾವುದೇ ಕೋರಿಕೆ/ಮನವಿಗಳನ್ನು ಆಯೋಗದಿಂದ ಪುರಸ್ಕರಿಸಲಾಗುವುದಿಲ್ಲ
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಿ
ಇನ್ನೂ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಿ ಭಾವಚಿತ್ರ/ಸಹಿ /ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಯುಪಿಐ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ ಭಾವಚಿತ್ರ/ ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ.
ವಿಶೇಷ ಸೂಚನೆ
ಸದರಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲ ದಾಖಲೆಗಳನ್ನು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅಪ್‌ಲೋಡ್ ಮಾಡತಕ್ಕದ್ದು. ಮೂಲ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಈಗಾಗಲೇ ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು ಎಂದು ಕೆಪಿಎಸ್‌ಸಿ ಹೇಳಿದೆ.