ಲೋಕಸಭೆ ಚುನಾವಣೆ ಸ್ಪರ್ಧೆಗೆ ಸಿದ್ದ: ದಕ ಬಿಜೆಪಿಗೆ ಕಗ್ಗಂಟಾದ ಸತ್ಯಜಿತ್ ಸುರತ್ಕಲ್!
ಬಂಟ್ವಾಳ: ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಂಟ್ವಾಳದಲ್ಲಿ ನಡೆದ ಜಿಲ್ಲಾ ಮಟ್ಟದ ಅಭಿಮಾನಿಗಳ ಹಕ್ಕೊತ್ತಾಯ ಸಮಾವೇಶದಲ್ಲಿ ಅವರು ಬಹಿರಂಗವಾಗಿಯೇ ಈ ಮಾತು ಹೇಳಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ನೀಡದಿದ್ದರೆ, ಸ್ವತಂತ್ರವಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಹಿಂದುತ್ವದ ಪ್ರಯೋಗ ಶಾಲೆ ಎಂದೇ ಗುರುತಿಸಿಕೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 26 ವರ್ಷಗಳಿಂದ ಹಿಂದುತ್ವ ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲು ಪ್ರಾಣ ಒತ್ತೆಯಿಟ್ಟು ದುಡಿದ ನನ್ನಂತಹವರಿಗೆ ಬಿಜೆಪಿ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಸಿಗಬೇಕು ಎಂಬುದು ಸಹಸ್ರಾರು ಮಂದಿ ಕಾರ್ಯಕರ್ತರ ಒಕ್ಕೊರಲ ಆಗ್ರಹವಾಗಿದೆ ಎಂದು ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಜನಾಗ್ರಹ ಸಮಾವೇಶದಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಒಬ್ಬರಿಗೆ ಎರಡು ಅಥವಾ ಮೂರು ಅವಧಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಬೇಕು. ಮಾತ್ರವಲ್ಲದೇ ಪಕ್ಷಾಂತರಿಗಳು ಬಲಿಷ್ಠ ಸಮುದಾಯಗಳಿಗೆ ಮನೆ ಹಾಕುವ ಬದಲಾಗಿ ಹಿಂದುತ್ವ ಮತ್ತು ಪಕ್ಷದ ಸಿದ್ಧಾಂತ ಉಳಿವಿಗೆ ಶ್ರಮ ವಹಿಸಿದ ಕಾರ್ಯಕರ್ತರಿಗೆ ಪ್ರಥಮ ಆದ್ಯತೆ ಸಿಗಬೇಕು. ಆ ಮೂಲಕ ರಾಜ್ಯದಲ್ಲಿ ಹಿಂದುತ್ವ ಮತ್ತು ಹಿಂದುಳಿದ ವರ್ಗ ಸಮುದಾಯ ಬಲಿಷ್ಠಗೊಂಡು ಸಾಮಾಜಿಕ ನ್ಯಾಯ ಸಿಗಲು ಸಹಕಾರಿಯಾಗುತ್ತದೆ.
ಕಳೆದ 6 ವರ್ಷಗಳಿಂದ ನನಗೆ ಯಾವುದೇ ಜವಾಬ್ದಾರಿ ನೀಡದೇ ಕಡೆಗಣಿಸಿದ ಪಕ್ಷದ ಕೆಲವೊಂದು ಸ್ವಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಸರ್ಕಾರ ನನಗೆ ನೀಡಿದ್ದ ಭದ್ರತಾ ಸಿಬ್ಬಂದಿಯನ್ನೂ ವಾಪಾಸ್ ಕರೆಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಹಲವು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ತಪ್ಪಿಸಿದ್ದು, ಎಂದಿಗೂ ಒಳ ಒಪ್ಪಂದ ರಾಜಕೀಯ ಮಾಡಿಕೊಳ್ಳದ ನನಗೆ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಲೇಬೇಕು ಎಂದು ಅವರು ಆಗ್ರಹಿಸಿದರು.
ಪ್ರಮುಖರಾದ ರವಿರಾಜ್ ಬಿ.ಸಿ.ರೋಡು, ಸಂದೀಪ್ ಪಂಪ್ವೆಲ್, ಧನಂಜಯ ಕುಂದಾಪುರ, ಆನಂದ ನಾಯ್ಕ ಭಟ್ಕಳ, ಕೃಷ್ಣಮೂರ್ತಿ ಬೆಂಗಳೂರು, ಕರುಣಾಕರ ಗೌಡ ಬರೆಮೇಲು, ಧನಂಜಯ ಪಟ್ಲ ಪುತ್ತೂರು, ಪ್ರದೀಪ ಬಜಿಲಕೇರಿ, ಸುಕೇಶ ಶೆಟ್ಟಿ ಕಿನ್ನಿಗೋಳಿ, ಪ್ರವೀಣ ಮೂಡಿಗೆರೆ, ಯಶಪಾಲ್ ಸಾಲ್ಯಾನ್, ಜಗದೀಶ ನೆತ್ತರಕೆರೆ, ಜನಾರ್ದನ ಬೆಳ್ತಂಗಡಿ, ನವೀನ ಕೊಟ್ಯಾನ್ ಬಿ.ಸಿ.ರೋಡು ಮತ್ತಿತರರು ಇದ್ದರು. ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.