Mohammad Shami: ಈ ಬಾರಿಯ ಐಪಿಎಲ್ ನಿಂದ ಹೊರ ಬಿದ್ದ ಮೊಹಮ್ಮದ್ ಶಮಿ
ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಹಾಗೂ ಅನುಭವಿ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಶಮಿ ತಮ್ಮ ಎಡ ಪಾದದ ಗಾಯಕ್ಕೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ(BCCI) ಮೂಲಗಳು ತಿಳಿಸಿರುವುದಾಗಿ ಪಿಟಿಐ ಗುರುವಾರ ವರದಿ ಮಾಡಿದೆ.
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ತಮ್ಮ ಮೊನಚಾದ ಬೌಲಿಂಗ್ ದಾಳಿಯಿಂದ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ಆರಂಭಿಕ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದಿದ್ದರೂ, ಆ ಬಳಿಕ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ವಿಶ್ವಕಪ್ ಬಳಿಕ ಶಮಿ ಗಾಯದ ಸಮಸ್ಯೆಯಿಂದ ಭಾರತ ಪರ ಆಡಿಲ್ಲ.
Mohammed Shami ruled out of the IPL 2024. [PTI] pic.twitter.com/zPWhSQ5o6N
— Johns. (@CricCrazyJohns) February 22, 2024
ಶಮಿ ಅವರು ವಿಶ್ವಕಪ್ ವೇಳೆಯೇ ಪಾದದ ನೋವಿನಿಂದ ಬಳಲುತ್ತಿದ್ದರು. ಆದರೆ ಅವರು ಈ ಗಾಯಕ್ಕೆ ಚುಚ್ಚು ಮದ್ದು ತೆಗೆದುಕೊಂಡು ದೇಶಕ್ಕಾಗಿ ಆಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಇದಕ್ಕೆ ಜನರು ದೇಶವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅವರು ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು ಮುಂದಿನ ತಿಂಗಳು ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಆದರೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೆ ನೀಡಿಲ್ಲ.
ಮೊಹಮ್ಮದ್ ಶಮಿ ಅವರು ಗುಜರಾತ್ ಟೈಟಾನ್ಸ್ ತಂಡದ ಆಟಗಾರನಾಗಿದ್ದು ಈ ಬಾರಿ ತಂಡವನ್ನು ಶುಭಮನ್ ಗಿಲ್ಮುನ್ನಡೆಸುತ್ತಿದ್ದಾರೆ. ಈ ಹಿಂದೆ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ತಂಡ ಸೇರಿದ್ದಾರೆ. ಉತ್ತಮ ಬೌಲಿಂಗ್ ಫಾರ್ಮ್ನಲ್ಲಿದ್ದ ಶಮಿ ಅವರು ಐಪಿಎಲ್ನಿಂದ ಹಿಂದೆ ಸರಿದರೆ ಗುಜರಾತ್ ತಂಡಕ್ಕೆ ಭಾರೀ ಹಿನ್ನಡೆಯಾಗುವುದು ಖಚಿತ. ಏಕೆಂದರೆ ಅನುಭವಿಯಾಗಿ ತಂಡದಲ್ಲಿದ್ದ ಏಕೈಕ ವೇಗಿ ಅವರಾಗಿದ್ದರು.