18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ
ಹೈದರಾಬಾದ್: ಯಾರಿಗೇ ಆಗಲಿ ಕುಟುಂಬವನ್ನು ತೊರೆದು ಬದುಕುವುದು ತುಂಬ ಕಷ್ಟ. ಬದುಕಿನ ಅನಿವಾರ್ಯತೆಗೆ ಸಿಲುಕಿ ಒಂದು ತಿಂಗಳು, ಆರು ತಿಂಗಳು ಕಷ್ಟಪಟ್ಟು ಕುಟುಂಬಸ್ಥರಿಂದ ದೂರ ಇರುವವರು ಇದ್ದಾರೆ. ಆದರೆ, ತೆಲಂಗಾಣದ (Telangana) ಐವರು ವ್ಯಕ್ತಿಗಳು ಕೆಲಸಕ್ಕೆಂದು ದುಬೈಗೆ (Dubai) ತೆರಳಿ, ಅಲ್ಲಿ ಸಂಕಷ್ಟಕ್ಕೆ ಸಿಲುಕಿ, ಜೈಲು ಸೇರಿ, ಸುಮಾರು 18 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ್ದಾರೆ. ಅವರು ತೆಲಂಗಾಣಕ್ಕೆ ಆಗಮಿಸುತ್ತಲೇ ಅವರನ್ನು ಕುಟುಂಬಸ್ಥರು ಭಾವುಕ ಕ್ಷಣಗಳ ಮೂಲಕ ಸ್ವಾಗತಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ (Viral Video) ಆಗಿದೆ.
ತೆಲಂಗಾಣದ ಶಿವರಾತ್ರಿ ಮಲ್ಲೇಶ್, ಶಿವರಾತ್ರಿ ರವಿ, ಗೊಲ್ಲೆಮ್ ನಾಂಫಳ್ಳಿ, ದುಂಡುಗುಳ ಲಕ್ಷ್ಮಣ್ ಹಾಗೂ ಶಿವರಾತ್ರಿ ಹಣಮಂತು ಅವರು 2005ರಲ್ಲಿ ಕೆಲಸಕ್ಕೆಂದು ದುಬೈಗೆ ತೆರಳಿದ್ದರು. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯವರಾದ ಇವರು ದುಬೈನಲ್ಲಿ ನೇಪಾಳ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಸಿಲುಕಿದ್ದರು. ವಾಚ್‌ಮನ್ ಆಗಿದ್ದ ನೇಪಾಳದ ವ್ಯಕ್ತಿಯನ್ನು ಕೊಂದ ಆರೋಪದಲ್ಲಿ ಐವರೂ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ನ್ಯಾಯಾಲಯವು ಇವರಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈಗ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ, ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಸಾಗಿದ್ದಾರೆ.
బీఆర్ఎస్ వర్కింగ్ ప్రెసిడెంట్, మాజీ మంత్రి @KTRBRS గారి పట్టువదలని కృషితో... 18 ఏండ్ల జైలు జీవితం అనంతరం దుబాయ్ నుండి స్వదేశానికి తిరిగి వచ్చిన రాజన్న సిరిసిల్ల జిల్లా వాసులు
— BRS Party (@BRSparty) February 21, 2024
అందరికీ విమాన టిక్కెట్లు సమకూర్చిన మాజీ మంత్రి, సిరిసిల్ల ఎమ్మెల్యే కేటీఆర్
ఆగని కన్నీళ్లు... 18… pic.twitter.com/1bEPM1zrw8
ಕೆ.ಟಿ.ರಾಮರಾವ್ ಪ್ರಯತ್ನದ ಫಲವಾಗಿ ಬಿಡುಗಡೆ
ತೆಲಂಗಾಣದ ಐವರು ವ್ಯಕ್ತಿಗಳು ದುಬೈ ಜೈಲಿನಿಂದ ಬಿಡುಗಡೆಯಾಗಿರುವುದರ ಹಿಂದೆ ಬಿಆರ್‌ಎಸ್ ನಾಯಕ, ಮಾಜಿ ಸಚಿವ ಕೆ.ಟಿ.ರಾಮರಾವ್ ಅವರ ಶ್ರಮ ಇದೆ ಎಂದು ಬಿಆರ್‌ಎಸ್ ಪಕ್ಷವು ತಿಳಿಸಿದೆ. ಹಾಗೆ ನೋಡಿದರೆ, ತೆಲಂಗಾಣದ ಐವರು ವ್ಯಕ್ತಿಗಳಿಗೆ ದುಬೈ ನ್ಯಾಯಾಲಯವು 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಕೆ.ಟಿ.ರಾಮರಾವ್ ಅವರು 2011ರಲ್ಲಿ ಐವರ ಕುಟುಂಬಸ್ಥರನ್ನು ಕರೆದುಕೊಂಡು ದುಬೈಗೆ ಹೋಗಿದ್ದರು. ಅಲ್ಲದೆ, ಐವರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ಕೊಡಿಸಿದ್ದರು. ಇವರ ಪರಿಶ್ರಮದ ಫಲವಾಗಿ ಐವರೂ ಬೇಗನೆ ಬಿಡುಗಡೆಯಾಗಿದ್ದಾರೆ ಎಂದು ಬಿಆರ್‌ಎಸ್ ತಿಳಿಸಿದೆ. ಹಾಗೆಯೇ, ವಿಡಿಯೊವನ್ನು ಕೂಡ ಹಂಚಿಕೊಂಡಿದೆ.
ಭಾಷೆಯ ಕಾರಣದಿಂದಾಗಿ ಐವರು ವ್ಯಕ್ತಿಗಳು ಕಾನೂನು ಹೋರಾಟ ಮಾಡಲು ಆಗಿರಲಿಲ್ಲ. ಹಾಗೆಯೇ, ಭಾರತದ ರಾಯಭಾರಿಗಳನ್ನು ಕೂಡ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೆ.ಟಿ.ರಾಮರಾವ್ ಅವರು ಹಣಕಾಸು, ರಾಜತಾಂತ್ರಿಕ, ಸಂವಹನದ ಮೂಲಕ ಕ್ಷಿಪ್ರವಾಗಿ ಐವರು ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ನೆರವಾಗಿದ್ದಾರೆ ಎಂದು ಪಕ್ಷವು ತಿಳಿಸಿದೆ. ಐವರು ವ್ಯಕ್ತಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ, ಅವರ ಕುಟುಂಬಸ್ಥರು ಹಾರ ಹಾಕಿ, ತಬ್ಬಿಕೊಂಡು, ಕಣ್ಣೀರು ಹಾಕಿ ಸ್ವಾಗತಿಸಿದ್ದಾರೆ. ಇಡೀ ಕುಟುಂಬ ಕೆ.ಟಿ.ರಾಮರಾವ್ ಅವರಿಗೆ ಕೃತಜ್ಞತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.