ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರ; ʼಸೆಲ್ಫಿʼ ಸಂಘರ್ಷಕ್ಕೆ ಇಬ್ಬರು ಬಲಿ...!
ಇಂಫಾಲ: ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ (Manipur Violence). ಮಣಿಪುರದ ಕುಕಿ-ಜೋ (Kuki-Zo) ಬುಡಕಟ್ಟು ಪ್ರಾಬಲ್ಯದ ಚುರಚಂದ್ಪುರ (Churachandpur) ಜಿಲ್ಲೆಯಲ್ಲಿ ಸಶಸ್ತ್ರ ದುಷ್ಕರ್ಮಿಗಳೊಂದಿಗಿನ ಸೆಲ್ಫಿ ವೈರಲ್ ಆದ ನಂತರ ಹೆಡ್ ಕಾನ್ಸ್ಟೇಬಲ್ ಅವರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ನೂರಾರು ಜನರು ಪ್ರತಿಭಟನೆ ನಡೆಸಿದ ನಂತರ ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ. ಫೆಬ್ರವರಿ 14ರಂದು ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಚುರಾಚಂದ್ಪುರ ಜಿಲ್ಲಾ ಪೊಲೀಸ್ನ ಸಿಯಾಮ್ಲಾಲ್ಪಾಲ್ ವಿಡಿಯೊ ಮಾಡುತ್ತಿರುವ ಕ್ಲಿಪ್ ವೈರಲ್ ಆಗಿತ್ತು.
ಸಶಸ್ತ್ರ ದುಷ್ಕರ್ಮಿಗಳು ಮತ್ತು ಗ್ರಾಮ ರಕ್ಷಣಾ ಸ್ವಯಂಸೇವಕರ ಬಂಕರ್ನಲ್ಲಿ ಸೆಲ್ಫಿ ತೆಗೆದುಕೊಂಡ ಹೆಡ್ ಕಾನ್ಸ್ಟೇಬಲ್ ಸಿಯಾಮ್ಲಾಲ್ಪಾಲ್ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಸುತ್ತುವರಿದಿದ್ದರು. ಬಳಿಕ ಪ್ರತಿಭಟನಾಕಾರರು ಕಚೇರಿಯ ಹೊರಗೆ ಬಸ್ ಮತ್ತು ಇತರ ಕಟ್ಟಡಗಳಿಗೆ ಬೆಂಕಿ ಹಚ್ಚಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾ ಪಡೆಗಳಿಗೆ ಮುಂದಾದರು. ಈ ಸಂಘರ್ಷದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
“ಚುರಚಂದ್ಪುರ ಜಿಲ್ಲಾ ಪೊಲೀಸ್ನ ಸಿಯಾಮ್ಲಾಲ್ಪಾಲ್ ವಿರುದ್ಧ ಇಲಾಖಾ ತನಿಖೆ ನಡೆಸಲು ಚಿಂತನೆ ನಡೆಸಲಾಗಿದೆ. ಅವರು ಫೆಬ್ರವರಿ 14ರಂದು ಸಶಸ್ತ್ರ ವ್ಯಕ್ತಿಗಳೊಂದಿಗೆ ವಿಡಿಯೊ ಮಾಡುತ್ತಿರುವ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆʼʼ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಸುರ್ವೆ ತಿಳಿಸಿದ್ದಾರೆ.
Mob numbering approx. 300–400 attempted to storm the office of SP CCP today, pelting stones, etc. The SF, including the RAF, is responding appropriately by firing tear gas shells to control the situation. Things are under watch..
— Manipur Police (@manipur_police) February 15, 2024
ರಾಜ್ಯ ರಾಜಧಾನಿ ಇಂಫಾಲ್ನಿಂದ 65 ಕಿ.ಮೀ. ದೂರದಲ್ಲಿರುವ ಚುರಚಂದ್ಪುರದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಕ್ಷಿಪ್ರ ಕ್ರಿಯಾ ಪಡೆ (RAF) ಅಶ್ರುವಾಯು ಶೆಲ್ಗಳನ್ನು ಸಿಡಿಸಿದೆ ಎಂದು ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದಾರೆ. ʼʼಸುಮಾರು 300-400 ಜನರ ಗುಂಪು ಎಸ್ಪಿ ಸಿಸಿಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ಈ ವೇಳೆ ಕಲ್ಲು ತೂರಾಟವನ್ನೂ ನಡೆಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಆರ್ಎಎಫ್ , ಎಸ್ಎಫ್ (ಭದ್ರತಾ ಪಡೆಗಳು) ಅಶ್ರುವಾಯು ಶೆಲ್ಗಳನ್ನು ಸಿಡಿಸಿವೆ. ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ” ಎಂದು ಪೊಲೀಸರು ಹೇಳಿದ್ದಾರೆ. ಪೂರ್ವಾನುಮತಿ ಇಲ್ಲದೆ ಠಾಣೆಯಿಂದ ಹೊರಹೋಗದಂತೆ ಹೆಡ್ ಕಾನ್ಸ್ಟೆಬಲ್ಗೆ ತಿಳಿಸಲಾಗಿದೆ ಎಂದು ಶಿವಾನಂದ ಸುರ್ವೆ ತಿಳಿಸಿದ್ದಾರೆ.
ಪ್ರತಿಭಟನಾಕಾರರ ಆಗ್ರಹವೇನು?
ಹಿಂಸಾಚಾರದ ಹಿನ್ನೆಲೆಯಲ್ಲಿ ಸದ್ಯ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಅವರನ್ನು ಅನ್ಯಾಯವಾಗಿ ಅಮಾನತುಗೊಳಿಸಲಾಗಿದೆ ಮತ್ತು ಅವರನ್ನು ಮತ್ತೆ ನೇಮಿಸಬೇಕು ಎನ್ನುವುದು ಪ್ರತಿಭಟನಾಕಾರರ ಆಗ್ರಹ. ಕುಕಿ-ಜೋ ಬುಡಕಟ್ಟು ಜನಾಂಗದವರು ಪ್ರಾಬಲ್ಯ ಹೊಂದಿರುವ ಚುರಚಂದ್ಪುರ ಜಿಲ್ಲೆಯು ಮೇ 2023ರಲ್ಲಿ ಪ್ರಾರಂಭವಾದ ಜನಾಂಗೀಯ ಘರ್ಷಣೆಗಳಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಕುಕಿ-ಜೋ ಮತ್ತು ಮೈಥಿ ಬುಡಕಟ್ಟು ಗುಂಪುಗಳ ನಡುವಿನ ಜನಾಂಗೀಯ ಸಂಘರ್ಣೆಯಲ್ಲಿ ಇದುವರೆಗೆ ಸುಮಾರು 180 ಮಂದಿ ಮೃತಪಟ್ಟಿದ್ದಾರೆ ಮತ್ತು 50,000ಕ್ಕೂ ಅಧಿಕ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ