Weather Alert : ಫೆಬ್ರವರಿ ತಿಂಗಳ ಆರಂಭದಲ್ಲೇ ತಾಪಮಾನ ಏರಿಕೆ ; ಮಾರ್ಚ್ ನಲ್ಲಿ ಮಳೆಯಾಗುವ ಸಾಧ್ಯತೆ..?
ಇದೀಗ ಚಳಿಗಾಲ ಇದ್ದು, ಈ ವೇಳೆಯೇ ಬೆಂಗಳೂರಿನಲ್ಲಿ ಅತ್ಯದಿಕ ತಾಪಮಾನ ದಾಖಲಾಗುತ್ತಿದೆ. ಹೀಗೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದರೆ, ಇನ್ನು ಬೇಸಿಗೆ ಬಂದರೆ ಏನು ಗತಿ ಎಂಬಂತಾಗಿದೆ ಬೆಂಗಳೂರಿನ ಜನರ ಪರಿಸ್ಥಿತಿ. ಆದರೆ ಮಾರ್ಚ್ ವೇಳೆ ಮಳೆಯಾಗಲಿದ್ದು, ತಾಪಮಾನ ಕಡಿಮೆಯಾಗಿ ಭೂಮಿ ತಂಪಾಗಿಗುವ ಸಾಧ್ಯೆತೆಯಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಿವರಾತ್ರಿಗೂ ಮೊದಲೇ ಗರಿಷ್ಠ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗುತ್ತಿದೆ. ಬೇಸಿಗೆ ಆರಂಭ ಆಗುವ ಮಾರ್ಚ್ ತಿಂಗಳಿಗೂ ಮುನ್ನ ಫೆಬ್ರವರಿ ತಿಂಗಳ ಆರಂಭದಲ್ಲೇ ತಾಪಮಾನ ಏರಿಕೆ ಆಗಿದೆ. ಇಡೀ ರಾಜ್ಯದಲ್ಲೇ ಉಷ್ಣಾಂಶ ಹೆಚ್ಚಳ ಆಗುತ್ತಿದ್ದು, ಇದರಿಂದ ಜನರು ಬೇಸತ್ತಿದ್ದಾರೆ.
ಈಗಲೇ ಇಂತಹ ಪರಿಸ್ಥಿತಿ ಎದುರಾದರೆ ಮಾರ್ಚ್, ಏಪ್ರಿಲ್ನಲ್ಲಿ ತಾಪಮಾನ ಹೇಗಿರಬಹುದೆಂದು ಊಹಿಸಿಕೊಂಡರೆ ಭಯ ಆಗುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮಾರ್ಚ್ನಲ್ಲಿ ತಾಪಮಾನ ಹೆಚ್ಚಳದ ಭಯ ಈ ಬಾರಿ ಇರುವುದಿಲ್ಲ. ಮಾರ್ಚ್ನಲ್ಲಿ ಮಳೆರಾಯ ಅಬ್ಬರಿಸಿ ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವರ್ಷ ಮಾರ್ಚ್ನಲ್ಲೇ ಮಳೆಗಾಲ ಆರಂಭ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಾಗತಿಕ ಹವಾಮಾನ ಸಂಸ್ಥೆಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಪ್ರಸ್ತುತ ಬೆಂಗಳೂರಿನ ಸರಾಸರಿ ತಾಪಮಾನ 31 ಡಿಗ್ರಿ ಸೆಲ್ಸಿಯಸ್ನಷ್ಟಿದೆ. ಇನ್ನು 2005ರ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ನಷ್ಟಿದ್ದು ಇದು ದಾಖಲೆ ಆಗಿತ್ತು. ಇನ್ನು ಈ ಬಾರಿಯ ಏಪ್ರಿಲ್, ಮೇನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಲಿದ್ದು, 2005ರ ದಾಖಲೆ ಸರಿಗಟ್ಟುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮಾರ್ಚ್ನಲ್ಲಿ ಮಾತ್ರ ತಂಪಾದ ವಾತಾವರಣ ಇರಲಿದೆ ಎಂದು ಸೂಚನೆ ನೀಡಿದೆ.
ತಾಪಮಾನ ಹೆಚ್ಚಳ ಆಗುವುದರಿಂದ ಗಾಳಿಯ ಪ್ರಮಾಣ ಕಡಿಮೆಯಾಗಿ ಮಳೆ ಕ್ಷೀಣಿಸುತ್ತದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ 7.1 ಮಿ.ಮೀಟರ್ನಷ್ಟು ಮಳೆ ಆಗಬೇಕಿತ್ತು. ಆದರೆ ಇದುವರೆಗೂ ಯಾವುದೇ ಮಳೆಯ ಮುನ್ಸೂಚನೆಯೂ ಇಲ್ಲದಂತಾಗಿದೆ.
ಬಂಗಾಳಕೊಲ್ಲಿಯಿಂದ ಬೀಸುವ ಚಂಡಮಾರುತ ವಿರೋಧಿ ತಂಪಾದ ಗಾಳಿ ಬೆಂಗಳೂರಿನ ಉಷ್ಣಾಂಶವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಕಳೆದ ಎರಡ್ಮೂರು ದಿನಗಳಿಂದ ಈ ಲಕ್ಷ್ಮಣ ಕಂಡು ಬರುತ್ತಿದ್ದು, ಒಂದು ಡಿಗ್ರಿಯಷ್ಟು ಬಿಸಿ ಕಡಿಮೆ ಆಗಿದೆ. ಫೆಬ್ರವರಿ ಅಂತ್ಯದಲ್ಲಿ ಮತ್ತೆ ತಾಪಮಾನ ಹೆಚ್ಚಳ ಆಗಲಿದೆ ಎಂದು ತಿಳಿಸಿದೆ.
ಜಾಗತಿಕ ಹವಾಮಾನ ಸಂಸ್ಥೆಗಳ ಪ್ರಕಾರ ಬೇಸಿಗೆಯಲ್ಲಿ ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಳೆ ಆಗಲಿದೆ. ಎಲ್ ನಿನೋ ಪರಿಸ್ಥಿತಿ ಕಣ್ಮರೆಯಾದಷ್ಟೂ ಮಳೆಯ ಪ್ರಮಾಣ ಹೆಚ್ಚಿರಲಿದ್ದು, ಇಡೀ ರಾಜ್ಯದಲ್ಲಿ ಬೇಸಿಗೆಯಲ್ಲೇ ಶೇಕಡಾ 50-60ರಷ್ಟು ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಈ ವೇಳೆ ಮಳೆಯಾದರೆ ಕುಡಿಯುವ ನೀರಿನ ಹಾಹಾಕಾರವೂ ಕಡಿಮೆ ಆಗಲಿದೆ ಎನ್ನುವ ನೀರೀಕ್ಷೆಯಿದೆ.