Amith Sha: ಲೋಕಸಭೆ ಚುನಾವಣೆಗೂ ಮುನ್ನವೇ ಸಿಎಎ ಜಾರಿ; ಅಮಿತ್ ಶಾ
ಹೊಸದಿಲ್ಲಿ: 2019ರಲ್ಲಿ ಜಾರಿಗೊಳಿಸಲಾದ ಪೌರತ್ವ ತಿದ್ದುಪಡಿ ಕಾಯಿದೆಯನ್ನು (ಸಿಎಎ- CAA) ಈ ನಿಟ್ಟಿನಲ್ಲಿ ಅಗತ್ಯವಾದ ನಿಯಮಗಳನ್ನು ಹೊರಡಿಸಿದ ನಂತರ ಲೋಕಸಭೆ ಚುನಾವಣೆಗೂ (Lok Sabha Election 2024) ಮುನ್ನವೇ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಸಿಎಎ ವಿರುದ್ಧ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಲಾಗುತ್ತಿದೆ ಮತ್ತು ಪ್ರಚೋದಿಸಲಾಗುತ್ತಿದೆ. ಸಿಎಎ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಪೌರತ್ವವನ್ನು ನೀಡಲು ಉದ್ದೇಶಿಸಲಾಗಿದೆ. ಇದು ಯಾರೊಬ್ಬ ಭಾರತೀಯನ ಪೌರತ್ವವನ್ನು ಕಸಿದುಕೊಳ್ಳಲು ಇರುವುದಲ್ಲ ಎಂದು ಅವರು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಮತ್ತು ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಅವಧಿಗೆ ಸರಕಾರ ರಚಿಸಲಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಸಸ್ಪೆನ್ಸ್ ಇಲ್ಲ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಹ ತಾವು ಮತ್ತೆ ವಿರೋಧ ಪಕ್ಷದ ಬೆಂಚ್‌ಗಳಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಅರಿತುಕೊಂಡಿವೆ ಎಂದು ಶಾ ಹೇಳಿದ್ದಾರೆ.
ನಾವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ. ಆದ್ದರಿಂದ ದೇಶದ ಜನರು ಬಿಜೆಪಿಗೆ 370 ಸ್ಥಾನಗಳನ್ನು ಮತ್ತು ಎನ್‌ಡಿಎಗೆ 400 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ ಎಂದು ನಾವು ನಂಬುತ್ತೇವೆ ಎಂದು ʼಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ 2024ʼರಲ್ಲಿ ಶಾ ಹೇಳಿದರು.
ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತು ಇತರ ಕೆಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಗೆ ಸೇರುವ ಸಾಧ್ಯತೆಯ ಕುರಿತು ಕೇಳಲಾದ ಪ್ರಶ್ನೆಗೆ, ʼʼಬಿಜೆಪಿಗೆ ಕುಟುಂಬ ಯೋಜನೆಯಲ್ಲಿ ನಂಬಿಕೆ ಇದೆ, ಆದರೆ ರಾಜಕೀಯದಲ್ಲಿ ಅಲ್ಲ” ಎಂದು ಜೋಕ್ ಸಿಡಿಸಿದರು. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ, ಆದರೆ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದರು.
2024ರ ಚುನಾವಣೆಯು ಎನ್‌ಡಿಎ ಮತ್ತು ಭಾರತದ ವಿಪಕ್ಷದ ನಡುವಿನ ಚುನಾವಣೆಯಾಗಿರುವುದಿಲ್ಲ. ಬದಲು ಅಭಿವೃದ್ಧಿಪರ ಮತ್ತು ಕೇವಲ ಘೋಷಣೆಗಳನ್ನು ನೀಡುವವರ ನಡುವಿನ ಚುನಾವಣೆಯಾಗಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕುರಿತು ಕೇಳಿದ ಪ್ರಶ್ನೆಗೆ, 1947ರಲ್ಲಿ ದೇಶ ವಿಭಜನೆಗೆ ಅವರ ಪಕ್ಷವೇ ಕಾರಣವಾಗಿರುವುದರಿಂದ ನೆಹರು-ಗಾಂಧಿ ವಂಶಸ್ಥರಿಗೆ ಅಂತಹ ಮೆರವಣಿಗೆಯನ್ನು ಮುಂದುವರಿಸಲು ಯಾವುದೇ ಹಕ್ಕಿಲ್ಲ ಎಂದಿದ್ದಾರೆ
ಸಂಸತ್ತಿನಲ್ಲಿ ಸರ್ಕಾರವು ಮಂಡಿಸಿದ ಶ್ವೇತಪತ್ರದ ಬಗ್ಗೆ, “2014ರಲ್ಲಿ ಅಧಿಕಾರವನ್ನು ಕಳೆದುಕೊಂಡಾಗ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಯಾವ ಗೊಂದಲಕಾರಿ ಪರಿಸ್ಥಿತಿಯನ್ನು ದೇಶಕ್ಕೆ ತಂದಿತ್ತು ಎಂಬುದನ್ನು ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ದೇಶಕ್ಕೆ ಇದೆ. ಆ ಸಮಯದಲ್ಲಿ (2014) ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿತ್ತು. ಎಲ್ಲೆಡೆ ಹಗರಣಗಳು. ವಿದೇಶಿ ಹೂಡಿಕೆ ಬರುತ್ತಿರಲಿಲ್ಲ. ಆ ಸಮಯದಲ್ಲಿ ನಾವು ಶ್ವೇತಪತ್ರವನ್ನು ಹೊರತಂದಿದ್ದರೆ ಅದು ಜಗತ್ತಿಗೆ ತಪ್ಪು ಸಂದೇಶ ನೀಡುತ್ತಿತ್ತು. 10 ವರ್ಷಗಳ ನಂತರ ನಮ್ಮ ಸರ್ಕಾರ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿದೆ. ವಿದೇಶಿ ಹೂಡಿಕೆಯನ್ನು ತಂದಿದೆ ಮತ್ತು ಯಾವುದೇ ಭ್ರಷ್ಟಾಚಾರವಿಲ್ಲ. ಆದ್ದರಿಂದ ಶ್ವೇತಪತ್ರವನ್ನು ಪ್ರಕಟಿಸಲು ಇದು ಸರಿಯಾದ ಸಮಯ” ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ ಗೃಹ ಸಚಿವರು, ರಾಮನ ಜನ್ಮ ಸ್ಥಳದಲ್ಲಿಯೇ ಮಂದಿರ ನಿರ್ಮಾಣವಾಗಬೇಕು ಎಂದು ದೇಶದ ಜನತೆ 500-550 ವರ್ಷಗಳಿಂದ ನಂಬಿದ್ದರು. ಆದರೆ, ತುಷ್ಟೀಕರಣ ರಾಜಕಾರಣ ಮತ್ತು ಕಾನೂನು ಸುವ್ಯವಸ್ಥೆಯನ್ನು ಮುಂದಿಟ್ಟುಕೊಂಡು ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿಲ್ಲ ಎಂದರು.
ಏಕರೂಪ ನಾಗರಿಕ ಸಂಹಿತೆಯ ಕುರಿತು, ʼಅದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇತರರು ಸಹಿ ಮಾಡಿದ ಸಾಂವಿಧಾನಿಕ ಕಾರ್ಯಸೂಚಿಯಾಗಿದೆ. ಆದರೆ ಕಾಂಗ್ರೆಸ್ ತುಷ್ಟೀಕರಣದ ಕಾರಣದಿಂದ ಅದನ್ನು ನಿರ್ಲಕ್ಷಿಸಿದೆ. ಉತ್ತರಾಖಂಡದಲ್ಲಿ ಯುಸಿಸಿ ಜಾರಿ ಸಾಮಾಜಿಕ ಬದಲಾವಣೆಯಾಗಿದೆ. ಜಾತ್ಯತೀತ ದೇಶವು ಧರ್ಮ ಆಧಾರಿತ ನಾಗರಿಕ ಸಂಹಿತೆಗಳನ್ನು ಹೊಂದಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.