ಚಿಕ್ಕಮಗಳೂರು : ಬಿಜೆಪಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಮಾರಮಾರಿ; ಬಟ್ಟೆ ಹರಿದು ಮಾಜಿ ಅಧ್ಯಕ್ಷರ ಮೇಲೆ ಹಲ್ಲೆ..!
ಚಿಕ್ಕಮಗಳೂರು: ಬಿಜೆಪಿ ತಾಲೂಕು ಅಧ್ಯಕ್ಷರ ನೇಮಕ ವಿಚಾರಕ್ಕೆ ಮಾರಾಮಾರಿ ನಡೆದಿರುವ ಘಟನೆ ಮೂಡಿಗೆರೆಯ ತಾಲೂಕು ಬಿಜೆಪಿ ಕಚೇರಿ ಬಳಿ ನಡೆದಿದೆ. ಬಟ್ಟೆ ಹರಿದುಕೊಂಡು ಬಿಜೆಪಿ ಮುಖಂಡರು ಪರಸ್ಪರ ಕಿತ್ತಾಡಿದ್ದು, ಈ ವೇಳೆ ನಡೆದ ತೀವ್ರ ಹಲ್ಲೆಯಿಂದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಾಯಗೊಂಡಿದ್ದಾರೆ.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರತನ್ ಮೇಲೆ ಹಲ್ಲೆ ನಡೆದಿದೆ. ಮೂಡಿಗೆರೆ ತಾಲೂಕಿನ ಬಿಜೆಪಿ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ನೇಮಕವಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಘೋಷಿಸಿದ್ದಾರೆ. ಈ ವೇಳೆ ನೂತನ ಅಧ್ಯಕ್ಷರ ನೇಮಕಕ್ಕೆ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್ ಹಸ್ತಕ್ಷೇಪದಿಂದ ಅಧ್ಯಕ್ಷ ಸ್ಥಾನ ಕೈತಪ್ಪಿದೆ ಎಂದು ಅವರ ಮೇಲೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಣ್ಣ ಹಾಗೂ ಮತ್ತೊಬ್ಬ ಆಕಾಂಕ್ಷಿ ಭರತ್ ಅಸಮಾಧಾನ ಹೊರಹಾಕಿ, ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಯಿಂದ ಗಾಯಗೊಂಡ ಕೆ.ಸಿ. ರತನ್ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.