ನವದೆಹಲಿ: ಆರ್ಬಿಐ ನಿರ್ಬಂಧದ ಬಳಿಕ ಭಾರೀ ಸಂಕಷ್ಟ ಎದುರಿಸುತ್ತಿರುವ ಪೇಟಿಎಂ ಸಂಸ್ಥೆಯ ಸಿಇಒ ವಿಜಯ್ ಶೇಖರ್ ಶರ್ಮಾ ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ನಿರ್ಮಲಾ ಸೀತಾರಾಮನ್, ‘ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಇತ್ತೀಚಿನ ನಿರ್ಬಂಧಗಳಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ’ ಎಂದು ಹೇಳಿ ಪೇಟಿಎಂ ಸಿಇಒರನ್ನು ವಾಪಸ್ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.
Paytm: ನಿರ್ಮಲ ಸೀತಾರಾಮನ್ ರನ್ನು ಬೇಟಿಯಾದ ಪೇಟಿಎಂ ಸಿಇಒ ವಿಜಯ್ ಶೇಕರ್ ; ಹಣಕಾಸು ಸಚಿವೆ ಕೊಟ್ಟ ಉತ್ತರವೇನು?
ಕಳೆದ ವಾರ ಆರ್ಬಿಐ ಪೇಟಿಎಂಗೆ ಅದರ ಜನಪ್ರಿಯ ಡಿಜಿಟಲ್ ವ್ಯಾಲೆಟ್, ಠೇವಣಿ ಮತ್ತು ಕ್ರೆಡಿಟ್ ಉತ್ಪನ್ನಗಳ ಸೇವೆಯನ್ನು ನಿಲ್ಲಿಸುವಂತೆ ಸೂಚಿಸಿತ್ತು. ಇದಾದ ಬಳಿಕ ಸಂಕಷ್ಟ ಬಗೆಹರಿಸಲು ವಿಜಯ್ ಶೇಖರ್ ಶರ್ಮಾ ಯತ್ನಿಸುತ್ತಿದ್ದು, ಅವರ ಪ್ರಯತ್ನಗಳು ಫಲ ನೀಡಿಲ್ಲ.
ಅಂದಿನಿಂದ ಪೇಟಿಎಂ ಷೇರುಗಳು ಶೇ. 40ಕ್ಕಿಂತ ಹೆಚ್ಚು ಕುಸಿತ ಕಂಡಿದ್ದವು. ಆದರೆ ಮಂಗಳವಾರ ಅಲ್ಪ ಗಳಿಕೆ ದಾಖಲಿಸಿದ್ದವು. ಇದೀಗ ಬುಧವಾರವೂ ಷೇರು ಶೇ. 10ರಷ್ಟು ಏರಿಕೆ ಕಂಡು ಒಂಚೂರು ಕಂಪನಿ ನಿಟ್ಟುಸಿರು ಬಿಡುವಂತೆ ಮಾಡಿದೆ.
ನಿರ್ಮಲಾ ಸೀತಾರಾಮನ್ ಅವರೊಂದಿಗಿನ ವಿಜಯ್ ಶೇಖರ್ ಶರ್ಮಾ ಅವರ ಭೇಟಿಯು 10 ನಿಮಿಷಗಳ ಕಾಲ ನಡೆಯಿತು. ಈ ವೇಳೆ ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಹಣಕಾಸು ಸಚಿವರು ಪೇಟಿಎಂ ಸಿಇಒಗೆ ತಿಳಿಸಿದರು ಈ ವಿಷಯದ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರವೂ ಪೇಟಿಎಂ ಷೇರು ಏರಿಕೆ
ಮೂರು ದಿನಗಳ ತೀವ್ರ ಕುಸಿತದ ನಂತರ ಪೇಟಿಎಂ ಬ್ರ್ಯಾಂಡ್ನ ಮಾಲೀಕತ್ವ ಹೊಂದಿರುವ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ನ ಷೇರುಗಳು ಮಂಗಳವಾರ ಚೇತರಿಸಿಕೊಂಡಿದ್ದವು. ಬಿಎಸ್ಇಯಲ್ಲಿ ದಿನದಂತ್ಯಕ್ಕೆ ಶೇ. 3.02 ಏರಿಕೆಯಾಗಿ 451.60 ರೂ.ಗೆ ವಹಿವಾಟು ಮುಗಿಸಿದ್ದವು. ಕಂಪನಿಯ ಷೇರುಗಳು ಎನ್ಎಸ್ಇಯಲ್ಲಿ ಶೇ. 3.26ರಷ್ಟು ಏರಿಕೆ ಕಂಡು 452.80 ರೂ.ನಲ್ಲಿ ಸ್ಥಿರವಾಗಿದ್ದವು.ಇದೀಗ ಬುಧವಾರವೂ ಕಂಪನಿ ಷೇರುಗಳು ಗಳಿಕೆ ದಾಖಲಿಸಿವೆ. ಬುಧವಾರ ಮಧ್ಯಾಹ್ನ 2.17ರ ಹೊತ್ತಿಗೆ ಕಂಪನಿ ಷೇರುಗಳು 45.10 ರೂ. ಅಥವಾ ಶೇ. 10 ರಷ್ಟು ಗಳಿಕೆ ಕಂಡು 496.25 ರೂ.ನಲ್ಲಿ ಲಾಕ್ ಆಗಿದ್ದವು.