ಕೇಂದ್ರದ ಭಾರತ್ ಬ್ರ್ಯಾಂಡ್ನ ಅಕ್ಕಿ ಮಾರಾಟಕ್ಕೆ ಇಂದು ಚಾಲನೆ ; ಕೆಜಿ ಗೆ 29 ರೂ ಗೆ ಮಾರಟ..!
ಲೋಕ ಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದ್ದು ರಾಜಕೀಯ ಪಕ್ಷಗಳು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿವೆ. ಸದ್ಯ ಕೇಂದ್ರ ಸರ್ಕಾರ (Central Government) ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ್ ಬ್ರ್ಯಾಂಡ್ (Bharath Brand) ಅಕ್ಕಿ ಇಂದಿನಿಂದ ಗ್ರಾಹಕರ ಕೈಗೆ ಸಿಗಲಿದೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಾಹನಗಳಿಗೆ ಚಾಲನೆ ಸಿಗಲಿದೆ. ಈ ಮೂಲಕ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ ನೀಡಲಾಗುತ್ತಿದೆ. ಕೆಜಿ ಭಾರತ್ ಬ್ರ್ಯಾಂಡ್ ಅಕ್ಕಿಗೆ 29 ರೂ.ದರ ನಿಗದಿ ಮಾಡಲಾಗಿದೆ.
ಅಕ್ಕಿ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. ನಾಫೆಡ್-ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಇಂದು ನಾಫೆಡ್ನ 7 ಸಂಚಾರಿ ವಾಹನಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಭಾರತ್ ಅಕ್ಕಿ ಯೋಜನೆಯಡಿ ಕೆಜಿ ಭಾರತ್ ಅಕ್ಕಿ 29 ರೂ.ಗೆ ಲಭ್ಯವಾಗಲಿದೆ. 5 ಕೆಜಿ, 10 ಕೆಜಿ ಬ್ಯಾಗ್ಗಳಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಲಭ್ಯವಾಗಲಿದೆ. ಸಂಜೆ 4 ಗಂಟೆಯಿಂದ ಬೆಂಗಳೂರಿನಲ್ಲಿ ಭಾರತ್ ಅಕ್ಕಿ ಮಾರಾಟ ಆರಂಭವಾಗುತ್ತೆ. ನಾಳೆ ಮಂಡ್ಯ, ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳಲ್ಲೂ ಲಭ್ಯವಾಗಲಿದೆ.
ಆನ್ಲೈನ್ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿಗೆ ಅವಕಾಶ
ಇನ್ನು ರಿಲಯನ್ಸ್, ಫ್ಲಿಪ್ಕಾರ್ಟ್, ಬಿಗ್ ಬಾಸ್ಕೆಟ್ ಅಷ್ಟೇ ಅಲ್ಲದೆ ಆನ್ಲೈನ್ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದು. ಇನ್ನೊಂದು ವಾರದಲ್ಲಿ ಇತರೆ ಸ್ಟೋರ್ಗಳಲ್ಲೂ ಭಾರತ್ ಅಕ್ಕಿ ಲಭ್ಯವಾಗಲಿದೆ. ಎನ್‌ಸಿಸಿಎಫ್‌ನ ಮುಖ್ಯ ಗೋಡಾನ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ಅಕ್ಕಿ ತಲುಪಿಸಲು ಸಿದ್ಧತೆ ನಡೆದಿದೆ.
ರಾಜ್ಯದಲ್ಲಿ ದಿನಸಿ, ಧಾನ್ಯ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಇದರಿಂದ ಜನ ಕಂಗೆಟ್ಟಿದ್ದಾರೆ. ಈ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಸರ್ಕಾರ ಈಗಾಗಲೇ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಈಗ ಅಕ್ಕಿಯನ್ನೂ ಕೂಡ ಮಾರಾಟ ಮಾಡಲು ಮುಂದಾಗಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್) ಮತ್ತು ಕೇಂದ್ರೀಯ ಭಂಡಾರದ ಮಳಿಗೆಗಳಲ್ಲಿ ಮಾರಾಟಕ್ಕೆ ನಿರ್ಧರಿಸಲಾಗಿದ್ದು, ಇ–ಕಾರ್ಮಸ್ ವೇದಿಕೆಗಳಲ್ಲೂ ಅಕ್ಕಿ ದೊರೆಯಲಿದೆ.