ಸ್ಕಿಡ್ ಆಗಿ ಕಂದಕಕ್ಕೆ ಉರುಳಿದ ಕ್ಯಾಬ್ – 7 ಮಂದಿ ದುರ್ಮರಣ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಬಾರಾಮುಲ್ಲಾ ಜಿಲ್ಲೆಯಲ್ಲಿ ಕ್ಯಾಬ್ ಒಂದು ಸ್ಕಿಡ್ ಆಗಿ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಏಳು ಜನ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಅಪಘಾತದಲ್ಲಿ (Accident) ಏಳು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾಶ್ಮೀರದ ಟ್ರಾಫಿಕ್ ರೂರಲ್ ಕಾಶ್ಮೀರದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ರವೀಂದರ್ ಪಾಲ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಪ್ರತ್ಯೇಕ ಘಟನೆಯಲ್ಲಿ, ಜಮ್ಮು ಪ್ರದೇಶದ ಕಿಶ್ತ್ವಾರ್ನ ಮರ್ವಾನ್ ಪ್ರದೇಶದಲ್ಲಿ ರಸ್ತೆ ತೆರವು ಕಾರ್ಯದಲ್ಲಿ ತೊಡಗಿದ್ದ ಸ್ನೋ ಕಟರ್ ಯಂತ್ರ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.
ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನು ತ್ವರಿತವಾಗಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದು ಮನೋಜ್ ಸಿನ್ಹಾ ಅವರು ತಿಳಿಸಿದ್ದಾರೆ.
ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಸ್ಥಳದಲ್ಲೇ ಇಬ್ಬರ ದುರ್ಮರಣ
ಹಾಸನ: ರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ (Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಆಲೂರಿನ ಕೂಡಿಗೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪ್ರದೀಪ್ (30), ಗುರು (25) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾನೆ ಹೋಟೆಲ್ ಒಂದರ ಪೂಜೆಗೆ ಹೊರಟಿದ್ದ ವೇಳೆ, ಕೂಡಿಗೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.
ಟೈರ್ ಪಂಕ್ಚರ್ ಆಗಿ ರಸ್ತೆ ಮಧ್ಯೆಯೇ ಟಿಂಬರ್ ತುಂಬಿದ್ದ ಲಾರಿ ನಿಂತಿತ್ತು. ಮುಂಜಾನೆ ಮಂಜು ಆವರಿಸಿದ್ದ ಕಾರಣ ಕಾರಿನ ಚಾಲಕನಿಗೆ ಲಾರಿ ನಿಂತಿರುವುದು ಗಮನಕ್ಕೆ ಬಂದಿಲ್ಲ. ಇದರಿಂದ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲಿ ಉರುಳಿ ಬಿದ್ದಿದೆ.
ಆಲೂರು ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.