ಮಾಲ್ಡೀವ್ಸ್ ಪ್ರವಾಸ ನಂ.1 ಸ್ಥಾನದಲ್ಲಿದ್ದ ಭಾರತ ವಿವಾದದ ಬಳಿಕ ಈಗ 5ನೇ ಸ್ಥಾನಕ್ಕೆ ಕುಸಿತ
ನವದೆಹಲಿ: ಮಾಲ್ಡೀವ್ಸ್ (Maldives) ಪ್ರವಾಸೋದ್ಯಮದ ಮೇಲೆ ಭಾರತೀಯ ಪ್ರವಾಸಿಗರ ‘ಬಾಯ್ಕಾಟ್ ಮಾಲ್ಡೀವ್ಸ್’ (Boycott Maldives) ಅಭಿಯಾನದ ಬಿಸಿ ತಟ್ಟಿದೆ. ಕಳೆದ ವರ್ಷ ಮಾಲ್ಡೀವ್ಸ್ ಪ್ರವಾಸದಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ (India) ವಿವಾದದ ಬಳಿಕ ಈಗ 5ನೇ ಸ್ಥಾನಕ್ಕೆ ಕುಸಿದೆ.
ಕಳೆದ ಮೂರು ವಾರಗಳಲ್ಲಿ ಮಾಲ್ಡೀವ್ಸ್ ಪ್ರವಾಸದಲ್ಲಿ ಗಮನಾರ್ಹ ಬದಲಾವಣೆ ಎದುರಿಸಿದೆ. ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ಭಾರತೀಯರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಜ.28 ರಲ್ಲಿ ಪಡೆದ ಅಂಕಿಅಂಶಗಳು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟನ್ನು ಇದು ಪ್ರತಿಬಿಂಬಿಸುವಂತಿವೆ.
2023 ರಲ್ಲಿ ಯಾವ ದೇಶ ಯಾವ ಸ್ಥಾನದಲ್ಲಿತ್ತು?
1. ರಷ್ಯಾ: 18,561 ಪ್ರವಾಸಿಗರ ಆಗಮನ (10.6% ಮಾರುಕಟ್ಟೆ ಪಾಲು, 2023 ರಲ್ಲಿ 2 ನೇ ಸ್ಥಾನ)
2. ಇಟಲಿ: 18,111 ಆಗಮನ (10.4% ಮಾರುಕಟ್ಟೆ ಪಾಲು, 2023 ರಲ್ಲಿ 6 ನೇ ಸ್ಥಾನ)
3. ಚೀನಾ: 16,529 ಆಗಮನ (9.5% ಮಾರುಕಟ್ಟೆ ಪಾಲು, 2023 ರಲ್ಲಿ 3 ನೇ ಸ್ಥಾನ)
4. ಯುಕೆ: 14,588 ಆಗಮನ (8.4% ಮಾರುಕಟ್ಟೆ ಪಾಲು, 2023 ರಲ್ಲಿ 4 ನೇ ಸ್ಥಾನ)
5. ಭಾರತ: 13,989 ಆಗಮನ (8.0% ಮಾರುಕಟ್ಟೆ ಪಾಲು, 2023 ರಲ್ಲಿ 1 ನೇ ಸ್ಥಾನ)
6. ಜರ್ಮನಿ: 10,652 ಆಗಮನ (6.1% ಮಾರುಕಟ್ಟೆ ಪಾಲು)
7. USA: 6,299 ಆಗಮನ (3.6% ಮಾರುಕಟ್ಟೆ ಪಾಲು, 2023 ರಲ್ಲಿ 7 ನೇ ಸ್ಥಾನ)
8. ಫ್ರಾನ್ಸ್: 6,168 ಆಗಮನ (3.5% ಮಾರುಕಟ್ಟೆ ಪಾಲು, 2023 ರಲ್ಲಿ 8 ನೇ ಸ್ಥಾನ)
9. ಪೋಲೆಂಡ್: 5,109 ಆಗಮನ (2.9% ಮಾರುಕಟ್ಟೆ ಪಾಲು, 2023 ರಲ್ಲಿ 14 ನೇ ಸ್ಥಾನ)
10. ಸ್ವಿಟ್ಜರ್ಲೆಂಡ್: 3,330 ಆಗಮನ (1.9% ಮಾರುಕಟ್ಟೆ ಪಾಲು, 2023 ರಲ್ಲಿ 10 ನೇ ಸ್ಥಾನ)
ಕಳೆದ ವರ್ಷ ಡಿ.31 ರ ಹೊತ್ತಿಗೆ ಭಾರತವು ಪ್ರವಾಸಿಗರ ಸಂಖ್ಯೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿತ್ತು. 2,09,198 ಪ್ರವಾಸಿಗರ ಆಗಮನದೊಂದಿಗೆ ಆ ವರ್ಷದ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಮಾರುಕಟ್ಟೆಯ ಸುಮಾರು ಶೇ.11 ರಷ್ಟನ್ನು ಹೊಂದಿತ್ತು.
ಮಾಲ್ಡೀವ್ಸ್-ಭಾರತ ಬಿಕ್ಕಟ್ಟಿಗೆ ಕಾರಣ ಏನು?
ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹೈಪ್ ಕ್ರಿಯೇಟ್ ಮಾಡಿತ್ತು. ಗೂಗಲ್‌ನಲ್ಲಿ ಹೆಚ್ಚಿನ ಮಂದಿ ಮಾಲ್ಡೀವ್ಸ್‌ಗಿಂತ ಲಕ್ಷದ್ವೀಪ ಕುರಿತು ಸರ್ಚ್ ಮಾಡಿದ್ದರು. ಸಹಜವಾಗಿ ಇದು ಮಾಲ್ಡೀವ್ಸ್ ಬೇಸರಕ್ಕೆ ಕಾರಣವಾಯಿತು. ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್ ಗುರಿಯಾಗಿಸಿಕೊಂಡಿದ್ದಾರೆ ಎಂದು ಅಲ್ಲಿನ ಸಚಿವರು ಅಸಮಾಧಾನ ಹೊರಹಾಕಿದ್ದರು.
ಭಾರತ ಕುರಿತು ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಭಾರತೀಯ ಪ್ರವಾಸಿಗರು ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನ ನಡೆಸಿದರು. ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿದ್ದ ಟಿಕೆಟ್ ಬುಕಿಂಗ್ ರದ್ದುಗೊಳಿಸಿಕೊಂಡರು. ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಳ್ಳುವವರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚಿದ್ದರು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಳ್ಳುವ ಭಾರತೀಯರ ಸಂಖ್ಯೆ ಕುಸಿದಿದೆ.