ಮೂರು ಲಕ್ಷ ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿದ ಮಗ
ಬಾಗಲಕೋಟೆ: ಅಪ್ಪನ ಕೊಲೆ ಮಾಡಲು ಮಗನೇ ಮೂರು ಲಕ್ಷ ಸುಪಾರಿ ಕೊಟ್ಟ ಪ್ರಕರಣವೊಂದು ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಚೆನ್ನಪ್ಪ (66) ಕೊಲೆಯಾದ ತಂದೆ. ವಿಕಲಚೇತನನಾಗಿರುವ ಮಗ ಚೆನ್ನಬಸಪ್ಪ ವಿಜಯಪುರ (Vijayapur) ಜಿಲ್ಲೆ ನಿಡಗುಂದಿ ಮೂಲದ ಮಾಂತೇಶ್‍ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.
ಆಸ್ತಿಗಾಗಿ ಕೊಲೆ: 32 ಎಕರೆ ಆಸ್ತಿ ಅದರಲ್ಲಿ ವಿಭಾಗ ಮಾಡುವ ವಿಚಾರಕ್ಕೆ ಪದೇ ಪದೇ ಕಲಹ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಅಪ್ಪನನ್ನು ಕೊಲೆ ಮಾಡಲು ಮಗ ಪ್ಲಾನ್ ಮಾಡಿದ್ದಾನೆ. ಅಂತೆಯೇ ಚೆನ್ನಬಸಪ್ಪ, ಸೊಸೆ ಶಿವಬಸವ್ವ ಹಾಗೂ ಮಗನ ಆಪ್ತ ರಮೇಶ್ ಮನಗೂಳಿ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಾರೆ. ಬಳಿಕ ಮಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ಹಣ ನೀಡಿದ್ದಾರೆ. ಅಂತೆಯೇ ಚೆನ್ನಪ್ಪನನ್ನು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗ ಚನ್ನಬಸಪ್ಪ, ಸೊಸೆ ಶಿವಬಸವ್ವ, ಸುಪಾರಿ ಪಡೆದು ಕೊಲೆ ಮಾಡಿದ ಮಾಂತೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ – 30 ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿ
ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ದುರಂತ (Fire Tragedy) ಸಂಭವಿಸಿದ್ದು, ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ನಗರದ ಬಳೆಪೇಟೆಯ ಪೇಯಿಂಟ್ ಶಾಪ್‌ನಲ್ಲಿ (Paint Shop) ಬೆಂಕಿ ಕಾಣಿಸಿಕೊಂಡಿದ್ದು, ಎರಡು ಅಂತಸ್ಥಿನ ಕಟ್ಟದ ಹೊತ್ತಿ ಉರಿದಿದೆ. ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಅಂಗಡಿ ಕಳೆದುಕೊಂಡ ಕುಟುಂಬ ಕಣ್ಣೀರಿಟ್ಟಿದೆ.
ಬಳೆಪೇಟೆಯ ಪೇಯಿಂಟ್ ಶಾಪ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಕ್ಷಣಗಳಲ್ಲೇ ಎರಡು ಅಂತಸ್ಥಿಗೆ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಾಲೀಕ ಕೃಷ್ಣಮೂರ್ತಿ ಕುಟುಂಬ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 20 ವರ್ಷಗಳಷ್ಟು ಹಳೆಯ ಬಿಲ್ಡಿಂಗ್‌ನಲ್ಲಿ ಇದೇ ಮೊದಲಬಾರಿಗೆ ಅಗ್ನಿ ಅನಾಹುತ ಸಂಭವಿಸಿದೆ ಎಂದು ಸಹ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಇನ್ನೂ ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಕಟ್ಟಡದ ಒಳಗೆ ಪ್ರವೇಶಿಸಿ ಅಲ್ಲಿಯೇ ಸಿಲುಕಿದ್ದ ಯುವಕನನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಜೆಸಿಬಿ ಬಳಸಿ ಕಟ್ಟಡದ ಶಟರ್ ಮುರಿದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.