ಬಾಕ್ಸಿಂಗ್ ಗೆ ನಿವೃತ್ತಿ ಘೋಷಿಸಿದ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್...!
ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ (MC Mary Kom) ತಮ್ಮ ಬಾಕ್ಸಿಂಗ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಬುಧವಾರ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇರಿ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 23 ವರ್ಷಗಳ ತಮ್ಮ ಬಾಕ್ಸಿಂಗ್ ಕೆರಿಯರ್ಗೆ ಮೇರಿ ಕೋಮ್ ಗುಡ್ ಬೈ ಹೇಳಿದ್ದಾರೆ.
‘ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ನನಗೆ ಇನ್ನೂ ಸ್ಪರ್ಧಿಸುವ ಹಸಿವು ಇದೆ. ಆದರೆ ಅಂತರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್ ನಿಯಮಗಳು ನನಗೆ ಹಾಗೆ ಮಾಡಲು ಅನುಮತಿಸುವುದಿಲ್ಲ. ಪುರುಷ ಮತ್ತು ಮಹಿಳಾ ಬಾಕ್ಸರ್ಗಳಿಗೆ 40 ವರ್ಷ ವಯಸ್ಸಿನವರೆಗೆ ಮಾತ್ರ ಹೋರಾಡಲು ಅವಕಾಶವಿದೆ. ಆದ್ದರಿಂದ ನಾನು ಈಗ ಯಾವುದೇ ದೊಡ್ಡ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರ ಮಾಡಿದ್ದೇನೆ ಎಂದು 41 ವರ್ಷದ ಮೇರಿ ಕೋಮ್ ತಿಳಿಸಿದ್ದಾರೆ.
ಮೇರಿ ಕೋಮ್ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದು 2022 ರಲ್ಲಿ. ಕಾಮನ್ವೆಲ್ತ್ ಗೇಮ್ಸ್ನ ಟ್ರಯಲ್ಸ್ನಲ್ಲಿ ಆಡಿದ್ದ ಅವರು ಮೊಣಕಾಲು ಗಾಯಕ್ಕೆ ತುತ್ತಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
6 ಬಾರಿ ವಿಶ್ವ ಚಾಂಪಿಯನ್:
ಮೇರಿ ಕೋಮ್ 6 ಬಾರಿ ವಿಶ್ವ ಚಾಂಪಿಯನ್ ಕಿರೀಟ ತಮ್ಮದಾಗಿಸಿಕೊಂಡಿದ್ದರು. ನಿಖರ ಪಂಚ್ಗಳಿಗೆ ಹೆಸರುವಾಸಿಯಾಗಿದ್ದ ಕೋಮ್ ಈ ಸಾಧನೆ ಮಾಡಿದ ಏಕೈಕ ಮಹಿಳಾ ಬಾಕ್ಸರ್ ಎಂಬುದು ವಿಶೇಷ. ಇದಲ್ಲದೆ 5 ಬಾರಿ ಏಷ್ಯನ್ ಚಾಂಪಿಯನ್ಶಿಪ್ ಗೆದ್ದ ಏಕೈಕ ಆಟಗಾರ್ತಿ ಎಂಬ ದಾಖಲೆ ಕೂಡ ಮೇರಿ ಕೋಮ್ ಹೆಸರಿನಲ್ಲಿದೆ.
ಮೇರಿ ಕೋಮ್ ಅವರ ವೃತ್ತಿಜೀವನ:
18ನೇ ವಯಸ್ಸಿನಲ್ಲಿ ಅಖಾಡಕ್ಕೆ: ಮೇರಿ ಕೋಮ್ ತಮ್ಮ ಬಾಕ್ಸಿಂಗ್ ವೃತ್ತಿಜೀವನವನ್ನು 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಾಂಟನ್ನಲ್ಲಿ ಪ್ರಾರಂಭಿಸಿದರು. ಮೊದಲ ಪಂದ್ಯದಲ್ಲೇ ತಮ್ಮ ನಿಖರ ಬಾಕ್ಸಿಂಗ್ ತಂತ್ರದಿಂದ ಎಲ್ಲರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 48 ಕೆಜಿ ವಿಭಾಗದಲ್ಲಿ ಫೈನಲ್ಗೆ ತಲುಪಿದ್ದರು. ಆದರೆ ಕೊನೆಯ ಸುತ್ತಿನಲ್ಲಿ ಸೋತರೂ ಅದಾಗಲೇ ಬಾಕ್ಸಿಂಗ್ ರಿಂಗ್ನೊಳಗೆ ಹೊಸ ಸಂಚಲನ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು.
ಮಕ್ಕಳಿಗಾಗಿ ಬ್ರೇಕ್:
ಮೇರಿ ಕೋಮ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಐಬಿಎ) ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ. 2005, 2006, 2008 ಮತ್ತು 2010 ರಲ್ಲಿ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದಿದ್ದರು. 2008 ರ ಪ್ರಶಸ್ತಿಯನ್ನು ಗೆದ್ದ ನಂತರ ಮೇರಿ ಕೋಮ್ ತನ್ನ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಹಾಗೆಯೇ ಮಕ್ಕಳ ಪಾಲನೆಗಾಗಿ ಕೆಲ ಕಾಲ ರಿಂಗ್ನಿಂದ ಹೊರಗುಳಿದರು.
ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ:
ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ 51ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇತ್ತ ವೃತ್ತಿಜೀವನದ ಜೊತೆ ಸಾಂಸರಿಕ ಜೀವನವನ್ನು ಸರಿದೂಗಿಸಿದ ಕೋಮ್, ಈ ಸಾಧನೆ ಬೆನ್ನಲ್ಲೇ ಮಕ್ಕಳಿಗಾಗಿ ಮತ್ತೆ ಬ್ರೇಕ್ ತೆಗೆದುಕೊಂಡಿದ್ದರು. ಆ ಬಳಿಕ ಮತ್ತೆ ಬಾಕ್ಸಿಂಗ್ಗೆ ಮರಳಿದ್ದ ಮೇರಿ 2018 ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ತಮ್ಮ ಆರನೇ ಪ್ರಶಸ್ತಿಯನ್ನು ಗೆದ್ದರು. ಅಂದು ಅವರು ಉಕ್ರೇನ್ನ ಹನ್ನಾ ಒಖೋಟಾ ವಿರುದ್ಧ 5-0 ಅಂತರದಿಂದ ಗೆದ್ದಿದ್ದು ವಿಶೇಷ.
ಮೇರಿ ಕೋಮ್ ಸಿನಿಮಾ:
ಬಾಕ್ಸಿಂಗ್ ರಿಂಗ್ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಮೇರಿ ಕೋಮ್ ಅವರ ಜೀವನಾಧರಿತ ಸಿನಿಮಾ ಕೂಡ ನಿರ್ಮಾಣವಾಗಿದೆ. 2014 ರಲ್ಲಿ ಮೇರಿ ಕೋಮ್ ಹೆಸರಿನೊಂದಿಗೆ ಬಾಲಿವುಡ್ ಚಿತ್ರವೊಂದು ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಈ ಚಿತ್ರದಲ್ಲಿ ಮೇರಿ ಅವರ ಪಾತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಮೇರಿ ಕೋಮ್ ಅವರ ತೆರೆಮರೆಯ ಕಹಾನಿಗಳು ಬೆಳಕಿಗೆ ಬಂದವು.