ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ; ಕೊಲೆ ಎಂದು ಪತಿ ವಿರುದ್ದ ದೂರು
ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ಆ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇವೆ. ಪ್ರೀತಿಸಿ ಮದುವೆಯಾದ ನಂತರ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ, ಬರು ಬರುತ್ತಾ ಜಗಳ ನಡೆಯುತ್ತಿತ್ತು. ಇದೀಗ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಗೃಹಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಆತ್ಮಹತ್ಯೆಯಲ್ಲ ಕೊಲೆ ಅಂತಾ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಹೌದು ಸಂಸಾರ ಎಂಬ ನೌಕೆಯಲ್ಲಿ ಕೌಟುಂಬಿಕ ಕಲಹ ಉಂಟಾಗಿ, ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಮಂಡ್ಯ ನೆಹರೂನಗರದ ಪೂರ್ವ ಬಡಾವಣೆಯಲ್ಲಿ ನಡೆದಿದೆ. ಪದ್ಮ(36) ಮೃತ ಮಹಿಳೆ. ಇನ್ನ ಇದು ಆತ್ಮಹತ್ಯೆಯಲ್ಲ ಕೊಲೆ ಅಂತಾ ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಮಹಿಳೆ ಪದ್ಮ ಪತಿ ಸಿದ್ದರಾಜು ಎಂಬಾತನ ಮೇಲೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಅಂದಹಾಗೆ ರಾಮನಗರ ತಾಲೂಕಿನ ಅಂಕನಹಳ್ಳಿ ನಿವಾಸಿಯಾಗಿದ್ದ ಪದ್ಮ ಹಾಗೂ ಮಂಡ್ಯ ಮೂಲದ ಸಿದ್ದರಾಜು ನಡುವೆ ಪ್ರೀತಿ ಉಂಟಾಗಿ 13 ವರ್ಷದ ಕೆಳಗೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮುದ್ದಾದ ಮಕ್ಕಳು ಸಹ ಇವೆ. ಆದರೆ ಆನಂತರ ಹಣಕ್ಕಾಗಿ ಸಿದ್ದರಾಜು ಎಂಬಾತ ಸಾಕಷ್ಟು ಪೀಡಿಸುತ್ತಿದ್ದನಂತೆ. ಆಗಾಗ ಗಲಾಟೆ ಸಹ ನಡೆಯುತ್ತಿತ್ತು. ಹಲವು ಬಾರಿ ಹಲ್ಲೆ ಕೂಡ ನಡೆಸಿದ್ದನಂತೆ. ಹೀಗಾಗಿಯೇ ಇದರಿಂದ ಮನನೊಂದು ಪದ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಮಧ್ಯೆ ಕುಟುಂಬಸ್ಥರು ಮಾತ್ರ ಪತಿ ಸಿದ್ದರಾಜುನೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎನ್ನುತ್ತಿದ್ದಾರೆ.
ಅಂದಹಾಗೆ ಮದುವೆಯಾದ ನಂತರ ಒಂದು ಬಾರಿಗೂ ಮನೆಗೆ ಸಿದ್ದರಾಜು ಕಳುಹಿಸಲಿಲ್ಲವಂತೆ. ಅಲ್ಲದೆ ಪದ್ಮ ಸಂಬಂಧಿಕರನ್ನ ಕೂಡ ಮನೆಗೆ ಬರದಂತೆ ಒತ್ತಡ ಹಾಕುತ್ತಿದ್ದನಂತೆ. ನಿನ್ನೆ ಸಹ ಆತ್ಮಹತ್ಯೆ ಮಾಡಿಕೊಂಡ ನಂತರ ವಿಷಯವನ್ನು ತಿಳಿಸದೇ ಅಂತ್ಯಕ್ರಿಯೆ ತಯಾರಿ ಕೂಡ ಮಾಡಿಕೊಂಡಿದ್ದ. ವಿಚಾರ ತಿಳಿದು ಪದ್ಮ ಕುಟುಂಬಸ್ಥರು ಮಂಡ್ಯಕ್ಕೆ ಬಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಿದ್ದರಾಜುನನ್ನ ಪೂರ್ವಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಂಬಂಧಿಕರು ಒತ್ತಾಯ ಮಾಡುತ್ತಿದ್ದಾರೆ. ಒಟ್ಟಾರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಲಿದೆ.