ಕಿರುತೆರೆ ನಟಿ ದಿವ್ಯಶ್ರೀ ನಾಯಕ್ ತಂದೆ ಆತ್ಮಹತ್ಯೆ!
ಮಂಗಳೂರು (ಜ.21): ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಕರಾವಳಿ ಹಾಗೂ ಮಲೆನಾಡಿನ ರೈತರ ಜೀವನಾಡಿಯಾದ ಅಡಿಕೆ ಬೆಳೆಗೆ ಹಲವು ದಿನಗಳಿಂದ ಹಳದಿ ರೋಗ ಉಲ್ಬಣಗೊಂಡಿದೆ. ಈ ವರ್ಷ ಮಳೆ ಬಾರದ ಹಿನ್ನೆಲೆಯಲ್ಲಿ ಮತ್ತಷ್ಟು ರೋಗ ಉಲ್ಬಣಗೊಂಡು ಇಳುವರಿ ಸಂಪೂರ್ಣ ಕುಸಿತವಾಗಿದೆ. ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಿರುತೆರೆ ನಟಿ ದಿವ್ಯಶ್ರೀ ನಾಯಕ್ ಸುಳ್ಯ ಅವರ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆ ವಾದಕರಾಗಿದ್ದ ನಾರಾಯಣ ನಾಯಕ್, ಉತ್ತಮ ಇಬ್ಬರು ಪುತ್ರಿಯರನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ಇಂದು ಪತ್ನಿ ಮಗಳ ಮನೆಗೆ ಹೋಗಿದ್ದರು. ಇಂದು ಮಧ್ಯಾಹ್ನವಾದರೂ ಮನೆ ಬಾಗಿಲು ತೆರೆಯದ ಕಾರಣ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಉತ್ತಮ ಕೃಷಿಕರಾಗಿದ್ದ ನಾರಾಯಣ ನಾಯಕ್ ಅವರ ಅಡಿಕೆ ತೋಟಕ್ಕೆ ಹಳದಿ ರೋಗ ಬಾಧಿಸಿ ಸರ್ವನಾಶವಾಗಿದೆ. ಮತ್ತೊಂದೆಡೆ ಇವರ ರಬ್ಬರ್ ತೋಟದ ಇಳುವರಿ ಕುಂಠಿತವಾಗಿ ಜೀವನ ನಿರ್ವಹಣೆ ಕಷ್ಟವಾಗಿತ್ತು ಎನ್ನಲಾಗುತ್ತಿದೆ. ಇದೇ ಕಾರಣದಿಂದ ನಾರಾಯಣ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ನಾನು ಯಶಸ್ವಿ ಕೃಷಿಕನಾಗಬೇಕು ಎಂದು ಸಾಮಾನ್ಯ ಜಮೀನಿನಲ್ಲಿಯೂ ಅಡಿಕೆ ನಾಟಿ ಮಾಡಿ ಕುಳಿತುಕೊಂಡಿರುವವರು ಸಾಕಷ್ಟಿದ್ದಾರೆ. ಆದರೆ, ಹಲವು ವರ್ಷಗಳಿಂದ ಅಡಿಕೆ ಬೆಳೆ ಬೆಳೆಯುತ್ತಿರುವ ಕೃಷಿಕರೇ ಈಗ ಅಡಿಕೆಗೆ ಬಾಧಿಸುತ್ತಿರುವ ಹಳದಿ ರೋಗದಿಂದ ಬೇಸತ್ತು ಹೋಗಿದ್ದಾರೆ. ಹೀಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಬಾಧಿಸಿದ ಹಳದಿ ರೋಗ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದನೂ ಆಗಿದ್ದ ಕೃಷಿಕ ನಾರಾಯಣ್ ನಾಯಕ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗೃಹಪ್ರವೇಶ ಧಾರಾವಾಹಿ ನಟಿ ದಿವ್ಯಶ್ರೀ: ಮೂಲತಃ ಕಲಾವಿದರ ಕುಟುಂಬವಾದ ನಾರಾಯಣ ನಾಯಕ್ ಅವರ ಕುಟುಂಬದಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು ಉತ್ತಮವಾಗಿ ಬೆಳೆಸಿದ್ದರು. ಮಕ್ಕಳಿಗೂ ತಮಗೆ ಸಿದ್ಧಿಸಿದ್ದ ಚೆಂಡೆ ವಾದ್ಯವನ್ನು ಕಲಿಸಿದ್ದರು. ತಂದೆಯಂತೇ ಅವರ ಪುತ್ರಿ ದಿವ್ಯಶ್ರೀ ನಾಯಕ್ ಕೂಡ ಯಕ್ಷಗಾನದ ಮಹಿಳಾ ಚೆಂಡೆ ವಾದಕಿಯಾಗಿದ್ದರು. ಉತ್ತಮ ವಾಗ್ಮಿ ಹಾಗೂ ಸೌಂದರ್ಯವತಿಯಾಗಿರುವ ಅವರ ಪುತ್ರಿ ಕನ್ನಡ ಕಿರುತೆರೆಯನ್ನೂ ಪ್ರವೇಶ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಗೇಹ ಪ್ರವೇಶ ಧಾರಾವಾಹಿಯಲ್ಲಿ ವಿಲನ್ ರೋಲ್‌ನಲ್ಲಿ ನಟಿ ದಿವ್ಯಶ್ರೀ ನಾಯಕ್ ಕಾಣಿಸಿಕೊಂಡಿದ್ದರು.