ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ವಿರುದ್ಧ ಅಸ್ಸಾಂ ನಲ್ಲಿ ಎಫ್ಐಆರ್ ...!
ಅಸ್ಸಾಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ವಿರುದ್ಧ ಅಸ್ಸಾಂ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಯಾತ್ರೆಯ ಮಾರ್ಗ ಬದಲಾವಣೆಯಿಂದಾಗಿ ರಾಜ್ಯದ ಜೋರ್ಹತ್ ನಗರದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಧಿಕಾರಿಯೊಬ್ಬರು ಮಾತನಾಡಿ, ಅನುಮತಿಯಂತೆ ಯಾತ್ರೆ ಕೆಬಿ ರಸ್ತೆಯತ್ತ ಸಾಗಬೇಕಿತ್ತು. ಬದಲಾಗಿ ನಗರದಲ್ಲಿ ಬೇರೆ ಮಾರ್ಗದಲ್ಲಿ ಯಾತ್ರೆ ಕೈಗೊಳ್ಳಲಾಯಿತು. ಇದರಿಂದ ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನರ ಏಕಾಏಕಿ ನುಗ್ಗಿದ್ದರಿಂದ ಕೆಲವರು ಬಿದ್ದು ನೂಕುನುಗ್ಗಲು ಉಂಟಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಯಾತ್ರೆ ಮತ್ತು ಅದರ ಮುಖ್ಯ ಆಯೋಜಕರ ವಿರುದ್ಧ ಜೋರ್ಹತ್ ಸದರ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಭಾರತ ಜೋಡೊ ನ್ಯಾಯ ಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಜೈರಾಮ್ ರಮೇಶ್
ಅಸ್ಸಾಂ: ಭಾರತ ಜೋಡೊ ನ್ಯಾಯ ಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ್ ರಮೇಶ್, ‘ನಾವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಭಾರತ ಜೋಡೊ ನ್ಯಾಯ ಯಾತ್ರೆಗೆ ಜನರು ಸೇರದಂತೆ ತಡೆಯಲು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ 7 ದಿನಗಳ ಕಾಲ ನಾವು ಅಸ್ಸಾಂನಲ್ಲಿರುತ್ತೇವೆ. ಸಿಎಂಗೆ ಸಾಧ್ಯವಾದರೆ ನಮ್ಮನ್ನು ಬಂಧಿಸಲಿ’ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೊ ನ್ಯಾಯ ಯಾತ್ರೆಯು ಅಸ್ಸಾಂನ ಮಜುಲಿಯಲ್ಲಿ ಸಾಗುತ್ತಿದೆ.