ಗುಜರಾತ್ನಲ್ಲಿ ದೋಣಿ ಮಗುಚಿ 14 ವಿದ್ಯಾರ್ಥಿಗಳು ಸೇರಿ 16 ಮಂದಿ ದುರ್ಮರಣ...!
ಅಹಮದಾಬಾದ್: ಪ್ರವಾಸಕ್ಕೆಂದು ಬಂದಿದ್ದ ಶಾಲಾ ಮಕ್ಕಳು ಕೆರೆಯಲ್ಲಿ ವಿಹಾರಕ್ಕೆಂದು ಹೋಗಿದ್ದಾಗ ದೋಣಿ ಮಗುಚಿ 14 ವಿದ್ಯಾರ್ಥಿಗಳು ಸೇರಿದಂತೆ 16 ಮಂದಿ ದುರ್ಮಣರಕ್ಕೆ ಈಡಾದ ಘಟನೆ ಗುಜರಾತ್ನ ವಡೋದರಾದಲ್ಲಿ ನಡೆದಿದೆ. ಗುರುವಾರ ಸಂಜೆ ಈ ಘಟನೆ ನಡೆದಿದ್ದು. ದೋಣಿಯಕ್ಕಿದ್ದ ಇಬ್ಬರು ಶಿಕ್ಷಕರೂ ಮೃತಪಟ್ಟಿದ್ದು. ಕೆಲವರನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿ ದಡ ಸೇರಿಸಿದ್ದಾರೆ. ಇನ್ನೂ ಕಾಣೆಯಾದವರ ಹುಡುಕಾಟ ನಡೆಯುತ್ತಿತ್ತು. ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಪ್ರಧಾನಿ ಸಹಿತ ಹಲವಾರು ಗಣ್ಯರು ಶೋಕ ವ್ಯಕ್ತಪಡಿಸಿ ಕುಟುಂಬಗಳಿಗೆ ನೆರವು ಘೋಷಿಸಿದ್ಧಾರೆ.
Terrible tragedy in Vadodara, Gujarat. Boat carrying school children +teachers for picnic in Harni lake capsized. 16 dead. 💔
— Cow Momma (@Cow__Momma) January 18, 2024
And the nightmare is still unfolding.
According to reports, the boat with capacity of 16 was carrying 27 persons and there were no life jackets. pic.twitter.com/BInfYpoOOE
ವಡೋದರಾ ನಗರದ ನ್ಯೂ ಸನ್ ರೈಸ್ ಎಂಬ ಶಾಲೆಯ 23 ವಿದ್ಯಾರ್ಥಿಗಳು ಮತ್ತು 4 ಮಂದಿ ಶಿಕ್ಷಕರು ಪ್ರವಾಸಕ್ಕೆಂದು ಆಗಮಿಸಿದ್ದರು. ಅವರೆಲ್ಲರೂ ವಡೋದರಾ ನಗರದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಂಜೆ ಹೊತ್ತಿಗೆ ವಡೋದರಾ ನಗರದಲ್ಲಿರುವ ಹರಣಿ ಕೆರೆಗೆ ಆಗಮಿಸಿದ್ದರು. ಈ ಕೆರೆಯಲ್ಲಿ ದೋಣಿ ವಿಹಾರ ಜನಪ್ರಿಯವಾಗಿದೆ.
ಕೆರೆಯಲ್ಲಿ ವಿಹಾರ ಮಾಡಲು ವಿದ್ಯಾರ್ಥಿಗಳು ಇಷ್ಟಪಟ್ಟಿದ್ದರಿಂದ ಅವರನ್ನು ದೋಣಿಯಲ್ಲಿ ಕರೆದೊಯ್ಯಲಾಗಿತ್ತು. ಆ ದೋಣಿಯಲ್ಲಿ 15 ಮಂದಿಯನ್ನು ಮಾತ್ರ ಕರೆದೊಯ್ಯಲು ಅವಕಾಶವಿತ್ತು. ಆದರೆ ಒಂದೇ ತಂಡದಲ್ಲಿ ಎಲ್ಲರೂ ಹೋದರಾಯಿತು ಎಂದು 27 ಮಂದಿಯನ್ನೂ ಕೂರಿಸಲಾಗಿತ್ತು. ಸ್ವಲ್ಪ ದೂರದಲ್ಲಿಯೇ ಸಾಗಿದ ದೋಣಿ ಭಾರ ತಾಳಲಾರದೇ ಮಗುಚಿತು. ಕೆರೆಯಲ್ಲಿ ನೀರಿನ ಸಣ್ಣ ಅಲೆಯೂ ಇದ್ದುದರಿಂದ ದೋಣಿ ಮಗುಚಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಕೆರೆ ಆಳವಾಗಿದ್ದರಿಂದ ಕೆಲವರು ಅದರಲ್ಲಿ ಮುಳುಗಿ ಮೃತಪಟ್ಟರು. 14 ಮಕ್ಕಳು ಹಾಗೂ ಇಬ್ಬರ ಶವಗಳನ್ನು ಹೊರ ತೆಗೆಯಲಾಗಿದೆ. ಕೆಲವು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಇನ್ನೂ ಕೆಲವರ ಹುಡುಕಾಟ ಮುಂದುವರಿದಿತ್ತು.
ಕೆರೆ ನಿರ್ವಹಿಸುವವರು ನೀಡಿದ ಮಾಹಿತಿ ಆಧರಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(NDRF), ಗುಜರಾತ್ ರಾಜ್ಯ ವಿಪತ್ತು ತಂಡ( SDRF), ಅಗ್ನಿ ಶಾಮಕ ದಳದ ತಂಡ, ನುರಿತ ಈಜುಗಾರರನ್ನು ಕರೆಯಿಸಲಾಯಿತು. ಏಕಕಾಲಕ್ಕೆ ಎಲ್ಲರೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರಿಂದ ಹೆಚ್ಚಿನ ಮಕ್ಕಳು ಬದುಕುಳಿದರು. ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆದಿತ್ತು.
ಕೆರೆಯಲ್ಲಿ ದೋಣಿ ವಿಹಾರಕ್ಕೆ ಅಷ್ಟಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಯಾರೂ ಜೀವ ರಕ್ಷಕಾ ಜಾಕೆಟ್ ಅನ್ನು ಹಾಕಿಕೊಂಡಿರಲಿಲ್ಲ. ಶಿಕ್ಷಕರೂ ಕೂಡ ಹಾಗೆಯೇ ಬಂದಿದ್ದರು. ಇದರಿಂದ ಸಾವಿನ ಸಂಖ್ಯೆ ಅಧಿಕವಾಯಿತು ಎನ್ನಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ರಾಜ್ಯಪಾಲ ಭೂಪೇಂದ್ರ ಪಟೇಲ್ ಸಹಿತ ಹಲವರು ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ.
ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ನಿರ್ಲಕ್ಷ್ಯ ವಹಿಸಿದ್ದ ಕೆರೆ ದೋಣಿ ವಿಹಾರ ಪಡೆದ ಗುತ್ತಿಗೆದಾರರ ವಿರುದ್ದ ಕ್ರಮ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.