ಕಾರ್ಖಾನೆ ಕಾರ್ಮಿಕರ ಕೆಲಸದ ಅವಧಿ 12 ಗಂಟೆಯಿಂದ 8 ಗಂಟೆಗೆ ಇಳಿಕೆಗೆ ನಿರ್ಧಾರ...!
ಬೆಂಗಳೂರು: ಕಾರ್ಖಾನೆ ಕಾರ್ಮಿಕರ (Industry Workers) ಕೆಲಸದ ಅವಧಿ 12 ಗಂಟೆಯಿಂದ 8 ಗಂಟೆಗೆ ಇಳಿಕೆಗೆ ನಿರ್ಧಾರ ಮಾಡಲಾಗಿದೆ.
ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ನೀರಾವರಿ ಹೋರಾಟಗಾರರು, ಭೂ ಹೀನರ ಹೋರಾಟ ಸಮಿತಿ, ಕಟ್ಟಡ ಕಾರ್ಮಿಕರ ಹೋರಾಟ ಸಮಿತಿ ಹಾಗೂ ಮಹಿಳಾ ಸಂಘಟನೆಗಳು ಹಾಗೂ ಟ್ರೇಡ್ ಯೂನಿಯನ್ ಸಂಘಟನೆಗಳ ಸಮನ್ವಯ ಸಮಿತಿಯ ನಾಯಕರುಗಳು, ಪದಾಧಿಕಾರಿಗಳ ಜೊತೆ ಇಂದು ಸಿಎಂ ಸಭೆ ನಡೆಸಿದರು. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕಾರ್ಮಿಕ ಮುಖಂಡರಿಗೆ ಭರವಸೆ ನೀಡಿದರು.
ರೈತರ, ಕಾರ್ಮಿಕರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ, ಬಿಜೆಪಿ ಅವಧಿಯಲ್ಲಿ 8 ಗಂಟೆ ಅವಧಿಯನ್ನ 12 ಗಂಟೆಗೆ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ 12 ಗಂಟೆಯಿಂದ 8 ಗಂಟೆಗೆ ಕೆಲಸದ ಅವಧಿ ಇಳಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಈ ಬಗ್ಗೆ ಶೀಘ್ರವೇ ನಿರ್ಧಾರ ಪ್ರಕಟಿಸುವುದಾಗಿ ಸಿಎಂ ಭರವಸೆ ನೀಡಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಭೆಯಲ್ಲಿ ಭಾಗಿಯಾಗಿದ್ದರು.
ಇಂದಿನಿಂದ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ
ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಬಸವಣ್ಣ (Basavanna) ಅವರ ಹೆಸರನ್ನು ಸರ್ಕಾರ ಘೋಷಿಸಿದೆ. ಗುರುವಾರ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರದ ಪರವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವೀರಶೈವ ಲಿಂಗಾಯತ ಸ್ವಾಮೀಜಿಗಳ ನಿಯೋಗ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರವನ್ನು ಬರೆದು, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣ ನವರು ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ. ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ವಿಧಾನಸೌಧದ (Vidhana Soudha) ಸಮ್ಮೇಳನ ಸಭಾಂಗಣಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಜಾತಿ ರಹಿತ ಸಮಾಜದ ಕನಸು ಕಂಡವರು ಬಸವಣ್ಣ. ಸಮಾಜದಲ್ಲಿ ಸಾಮರಸ್ಯ ತರುವ ನಿಟ್ಟಿನಲ್ಲಿ ಅವರ ತತ್ವಗಳು ಹೆಚ್ಚು ಪ್ರಸಾರ ಆಗಬೇಕು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇಂದು ಬಸವಣ್ಣನವರ ತತ್ವ ಆದರ್ಶ ಎಲ್ಲಡೆ ಪಸರಿಸಬೇಕಾದ ಅಗತ್ಯ ಇದೆ. ಇದಕ್ಕೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡುತ್ತದೆ. 2025 ರಲ್ಲಿ ಅನುಭವ ಮಂಟಪ ಪೂರ್ಣಗೊಳ್ಳಬೇಕು. ಮುಂದಿನ ವರ್ಷ ಅನುಭವ ಮಂಟಪದ ಲೋಕಾರ್ಪಣೆ ಆಗಲಿದೆ ಎಂದಿದ್ದಾರೆ.