ಕ್ರಿಕೆಟ್ ಇತಿಹಾಸದಲ್ಲೆ ರೋಚಕ ಪಂದ್ಯ-2 ಸೂಪರ್ ಓವರ್; ಕೊನೆಗೂ ಆಫ್ಘಾನಿಸ್ತಾನದ ಎದುರು ಟೀಂ ಇಂಡಿಯಾಗೆ ರೋಚಕ ಗೆಲುವು
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಬುಧವಾರ ರಾತ್ರಿ ಹಬ್ಬವೋ ಹಬ್ಬ. ಎರಡು ಸೂಪರ್ ಓವರ್ ಗಳನ್ನು ಕಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ (IND Vs AFG) ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಭಾರತ ನೀಡಿದ 213 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಮ್ಯಾಚ್ ಟೈ ಆಯ್ತು. ಇದರಿಂದಾಗಿ ಆಟ ಸೂಪರ್ ಓವರ್ ಹಂತಕ್ಕೆ ದಾಟಿತು.
ಮೊದಲ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 16 ರನ್ ಗಳಿಸಿದರೆ, ಟೀಂ ಇಂಡಿಯಾ ಕೂಡಾ 16 ರನ್ ಗಳಿಸಿ ಮ್ಯಾಚ್ ಟೈ ಆಯ್ತು. ಈ ಹಿನ್ನೆಲೆಯಲ್ಲಿ ಪಂದ್ಯ 2ನೇ ಸೂಪರ್ ಓವರ್ ಹಂತಕ್ಕೆ ದಾಟಿತು.
ಎರಡನೇ ಸೂಪರ್ ಓವರ್ ನಲ್ಲಿ ಟೀಂ ಇಂಡಿಯಾ 11 ರನ್ ಮಾತ್ರ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಸೂಪರ್ ಓವರ್ ನಿಯಮವೇನು?:
* ಪ್ರತಿ ತಂಡವು 3 ಬ್ಯಾಟ್ಸ್ ಮೆನ್ ಹಾಗೂ ಓರ್ವ ಬೌಲರನ್ನು ಆಯ್ಕೆ ಮಾಡಬೇಕು.
* ಇಬ್ಬರು ಆಟಗಾರರು ಔಟ್ ಆದರೆ ತಂಡ ಆಲೌಟ್ ಆಗುತ್ತದೆ.
* ಸೂಪರ್ ಓವರ್ ನಲ್ಲಿ ಅತ್ಯಧಿಕ ರನ್ ಗಳಿಸಿದ ತಂಡ ವಿಜೇತ ಎಂದು ಘೋಷಣೆ
* ಪ್ರತಿ ತಂಡಕ್ಕೆ 1 ಓವರ್ ಆಡುವ ಅವಕಾಶ
ಅಫ್ಘಾನಿಸ್ತಾನದ 20 ಓವರ್ ಹೇಗಿತ್ತು..?:
ಭಾರತ ನೀಡಿದ 213 ರನ್ ಟಾರ್ಗೆಟ್ ಬೆನ್ನತ್ತಿದ ಅಫ್ಘಾನಿಸ್ತಾನ ಆರಂಭಿಕ ಆಟಗಾರರು ಮೊದಲ ವಿಕೆಟ್‍ಗೆ 93 ರನ್ ಗಳ ಜೊತೆಯಾಟ ನೀಡಿದರು. ಆರಂಭಿಕ ಆಟಗಾರರಾದ ರಹ್ಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂದ ಝದ್ರಾನ್ ತಲಾ 50 ರನ್ ಗಳಿಸಿ ಔಟಾದರು. ಒಂದು ಹಂತದಲ್ಲಿ ಮೊಹಮ್ಮದ್ ನಬಿ 16 ಎಸೆತೆಗಳಲ್ಲಿ 34 ರನ್‍ಗಳ ಸ್ಫೋಟಕ ಆಟ ಆಡಿದರು. 3 ಸಿಕ್ಸರ್ ಹಾಗೂ 2 ಬೌಂಡರಿಯನ್ನೊಳಗೊಂಡ ನಬಿ ಇನ್ನಿಂಗ್ಸ್ ವಾಷಿಂಗ್ಟನ್ ಸುಂದರ್ ಬೌಲಿಂಗಲ್ಲಿ ಆವೇಶ್ ಖಾನ್ ಕ್ಯಾಚ್ ಹಿಡಿಯುವುದರೊಂದಿಗೆ ಅಂತ್ಯವಾಯಿತು. ಗುಲ್ಬದೀನ್ ನಯೀಬ್ ಅರ್ಧ ಶತಕ ಬಾರಿಸಿ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು.
ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ 3 ವಿಕೆಟ್ ಗಳಿಸಿದರೆ, ಆವೇಶ್ ಖಾನ್ 1, ಕುಲದೀಪ್ ಯಾದವ್ 1 ವಿಕೆಟ್ ಗಳಿಸಿದರು.
ಭಾರತದ ಇನ್ನಿಂಗ್ಸ್:
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಒಂದು ಹಂತದಲ್ಲಿ 4.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಶತಕ (121 ರನ್) ಹಾಗೂ ರಿಂಕು ಸಿಂಗ್ ಆರ್ಧ ಶತಕ (69) ಜೊತೆಯಾಟ ಭಾರತ 212 ರನ್ ತಲುಪಿಸುವಲ್ಲಿ ಯಶಸ್ವಿಯಾಯಿತು.
ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಬ್ಯಾಟಿಂಗ್‍ಗೆ ಆಗಮಿಸಿದ ಕೊಹ್ಲಿ ಕೇವಲ 1 ಬಾಲ್ ಎದುರಿಸಿ ಕ್ಯಾಚ್ ಕೊಟ್ಟು ಔಟಾದರು. ಕೊಹ್ಲಿ ಬೆನ್ನಲ್ಲೇ ಆಗಮಿಸಿದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡಾ ಮೊದಲ ಎಸೆತದಲ್ಲೇ ಔಟಾಗಿ ಸೊನ್ನೆ ಸುತ್ತಿದರು. ಯಶಸ್ವಿ ಜೈಸ್ವಾಲ್ 4, ಶಿವಮ್ ದುಬೆ 1 ರನ್ ಗಳಿಸಿ ಔಟಾದರು.
ಆಫ್ಘಾನಿಸ್ತಾನ ಪರವಾಗಿ ಫರೀದ್ ಅಹ್ಮದ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಒಮರ್‍ಝೈ 1 ವಿಕೆಟ್ ಗಳಿಸಿದರು.