ಪುತ್ತೂರು: ನೀರಿನ ತೊಟ್ಟಿಗೆ ಬಿದ್ದು ಗೃಹಿಣಿ ಸಾವು..!
ಪುತ್ತೂರು: ಗೃಹಿಣಿಯೊಬ್ಬರ ಮೃತದೇಹ ಮನೆಯ ಸಮೀಪದ ನೀರಿನ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ಜ.17ರ ಮಧ್ಯಾಹ್ನದಂದು ಕೈಕಾರ ಎಂಬಲ್ಲಿ ನಡೆದಿದೆ.
ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರ ಪತ್ನಿ ಶುಭಲಕ್ಷ್ಮಿ (50) ಮೃತಪಟ್ಟ ಗೃಹಿಣಿ. ಅವರ ಮೃತದೇಹ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮನೆಯ ಗುಡ್ಡದ ಮೇಲೆ ಮಣ್ಣಿನ ಟ್ಯಾಂಕಿ ನಿರ್ಮಿಸಿ ಅದಕ್ಕೆ ಟಾರ್ಪಾಲು ಹಾಕಿ ನೀರು ನಿಲ್ಲಿಸಿದ್ದ ತೊಟ್ಟಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಗುಡ್ಡದ ಮೇಲೆ ಹೋದ ಶುಭಲಕ್ಷ್ಮೀ ಅವರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಈ ನೀರಿನ ತೊಟ್ಟಿಗೆ ಬಿದ್ದಿದ್ದು, ಆ ಭಾಗದಲ್ಲಿ ಯಾರೂ ಇಲ್ಲದ ಕಾರಣ ನೀರಿನ ತೊಟ್ಟಿಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಗಳು ಕಾಲೇಜಿಗೆ ತೆರಳಿದ್ದು, ಪುತ್ರ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ಪತಿ ಪ್ರಕಾಶ್ಚಂದ್ರ ರೈ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆಯ ಆರಂಭದಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಹಲವು ಅನುಮಾನಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಆದರೆ ಇದು ಆಕಸ್ಮಿಕ ಸಾವು ಎಂದು ಅವರ ಕುಟುಂಬ ದೃಢಪಡಿಸಿದೆ. ಮೃತರು ಪತಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಅಪ್ಪಯ್ಯ ಮಣಿಯಾಣಿ, ಡಾ.ಪ್ರಸಾದ್ ಭಂಡಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜೀವಂದರ್ ಜೈನ್ ಮತ್ತಿತರು ಭಾಗವಹಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
Kadaba: ಆತ್ಮಹತ್ಯೆಗೆ ಶರಣಾದ ನಿವೃತ್ತ ರೈಲ್ವೇ ಉದ್ಯೋಗಿ..!
ಕಡಬ: ರೈಲ್ವೇ ಇಲಾಖೆಯ ನಿವೃತ್ತ ಉದ್ಯೋಗಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಗುಂಡಿಮಜಲು ನಿವಾಸಿ ಮಾಧವ ರೈ (62) ಎಂಬವರು ಕೋಡಿಂಬಾಳ ರೈಲು ಮಾರ್ಗದ ಸಮೀಪ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದೊಂದು ಆತ್ಮಹತ್ಯೆ ಪ್ರಕರಣ ಆಗಿರಬೇಕೆಂದು ಶಂಕಿಸಲಾಗಿದ್ದು, ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಕೋಡಿಂಬಾಳದ ಅಯಪ್ಪ ಭಜನಾ ಮಂದಿರದ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಡಬ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ 6 ಮಂದಿ ಮಕ್ಕಳನ್ನು ಅಗಲಿದ್ದಾರೆ.