ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ದುರ್ಮರಣ
ಚಾಮರಾಜನಗರ: ಸಂಕ್ರಾಂತಿ ಹಬ್ಬದ ರಜೆಯ ಗುಂಗಿನಲ್ಲಿ ಕುಟುಂಬದ ಜೊತೆ ಬಂಡೀಪುರದ ಸಫಾರಿಗೆ (Bandipur National Park) ತೆರಳಲು ಹೋಗುತ್ತಿದ್ದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ (Accident) ಸಾವಿಗೀಡಾದ ಘಟನೆ ಕೊಳ್ಳೆಗಾಲದ ಸಮೀಪದ ಪಾಳ್ಯ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಸಂತೋಷ್, ಸೌಮ್ಯ ಹಾಗೂ ದಂಪತಿಯ ಮಕ್ಕಳಾದ ನಿತ್ಯ ಸಾಕ್ಷಿ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಇವರೆಲ್ಲ ಸಂಕ್ರಾಂತಿ ರಜೆಯ ಪ್ರಯುಕ್ತ ಬೈಕ್‍ನಲ್ಲಿ ಬಂಡೀಪುರ ಸಫಾರಿ ತೆರಳಲು ಸಜ್ಜಾಗಿದ್ದರು. ಬೆಳಗ್ಗೆ 11 ಗಂಟೆಗೆ ರೆಡಿಯಾದ ನಾಲ್ವರು ಬೈಕ್ ಏರಿ ಕೊಳ್ಳೆಗಾಲದ ಚರ್ಚ್‍ಗೆ ತೆರಳಿ ಪ್ರಾರ್ಥನೆ ಮಾಡಿ ಬಳಿಕ ಹೊರಟಿದ್ದರು. ಈ ವೇಳೆ ಓವರ್ ಟೇಕ್ ಮಾಡುವ ವೇಳೆ ಎದುರಿಗೆ ಬಂದ ಭತ್ತ ಕಟಾವು ಮಾಡುವ ಯಂತ್ರಕ್ಕೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಮೃತದೇಹಗಳು ಯಂತ್ರದ ಚೂಪಾದ ಭಾಗಗಳಲ್ಲಿ ಸಿಲುಕಿದ್ದು ಮನಕಲಕುವಂತಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
ಬೆಂಗ್ಳೂರಿನ ಮನೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ – 8 ಮಂದಿಗೆ ಗಂಭೀರ ಗಾಯ
ಬೆಂಗಳೂರು: ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು (ಮಂಗಳವಾರ) ಮುಂಜಾನೆ ಯಲಹಂಕದ ಎಲ್‌ಬಿಎಸ್‌ನಲ್ಲಿ ನಡೆದಿದೆ.
ಅಫರ್ವಾಜ್, ಸಲ್ಮಾ, ಶಾಹಿದ್, ಫಸಿಯಾ, ಅಸ್ಮಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರಿಗೆ 60% ರಷ್ಟು ಸುಟ್ಟಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಯಲಹಂಕ ಸರ್ಕಾರಿ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಉಳಿದವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಗಾಯಾಳುಗಳನ್ನು ಕಂಡ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಮನೆಯ ಅವಶೇಷಗಳನ್ನು ಕಂಡು ಗಾಬರಿಯಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಂದು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಛಿದ್ರವಾಗಿದೆ. ಪಕ್ಕದ ನಾಲ್ಕು ಮನೆಗಳಿಗೂ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು, ಕಿಟಕಿಗಳು, ಬಾಗಿಲುಗಳು ಪೀಸ್ ಪೀಸ್ ಆಗಿವೆ. ಮನೆಯಲ್ಲಿನ ವಿದ್ಯುತ್ ಮೀಟರ್ ಬಾಕ್ಸ್ಗಳಿಗೂ ಹಾನಿಯಾಗಿದೆ.
ವಿದ್ಯುತ್ ಕೇಬಲ್‌ಗಳಿಗೂ ಹಾನಿಯಾಗಿದ್ದು, ತಕ್ಷಣಕ್ಕೆ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳು ಶೇಕ್ ಆಗಿವೆ. ಒಟ್ಟು 5 ಮನೆಗಳಿರೋ ಜಾಗ ಇದು.