ರಾಮಮಂದಿರ ಉದ್ಘಾಟನೆಗೂ ಮುನ್ನ, ಅಯೋಧ್ಯೆಯಲ್ಲಿ 14.5 ಕೋಟಿ ಮೌಲ್ಯದ ಭೂಮಿ ಖರೀದಿಸಿದ ಅಮಿತಾಬ್ ಬಚ್ಚನ್!
Twitter
Facebook
LinkedIn
WhatsApp
ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೂ ಮುನ್ನ ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಯೋಧ್ಯೆಯಲ್ಲಿ 14.5 ಕೋಟಿ ಮೌಲ್ಯದ ಭೂಮಿ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಅಲಹಾಬಾದ್‌ನಲ್ಲಿ (ಈಗ ಪ್ರಯಾಗ್‌ರಾಜ್) ಜನಿಸಿದ ಹಿರಿಯ ಬಾಲಿವುಡ್ ನಟ ದಿ ಸರಯೂನಲ್ಲಿ ಜಾಗ ಖರೀದಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದ ಬಹು ನಿರೀಕ್ಷಿತ ಉದ್ಘಾಟನೆಗೆ ಮುನ್ನವೇ ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ (HoABL) ಕಡೆಯಿಂದ ಅಯೋಧ್ಯೆಯಲ್ಲಿ 14.5 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವಂತೆ ಈ ಭೂಮಿ 10,000 ಚದರ ಅಡಿ ವಿಸ್ತೀರ್ಣದ ದಿ ಸರಯೂನಲ್ಲಿ ಇದೆ. ಇದು ಐಷಾರಾಮಿ 7-ಸ್ಟಾರ್ ಪ್ಲಾಟ್ ಅಭಿವೃದ್ಧಿಯಾಗಿದೆ. ಈ ಸ್ಥಳವು ಐತಿಹಾಸಿಕ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಿಂದ ಕೇವಲ 15 ನಿಮಿಷಗಳ ಪ್ರಯಾಣವಾಗಿದೆ ಎಂಬುದು ಗಮನಾರ್ಹ.
ನಟ ಅಮಿತಾಬ್ ಬಚ್ಚನ್ ಅವರ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. “ಅಯೋಧ್ಯೆಯು ಅದರ ಕಾಲಾತೀತ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದಾಗಿ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಭೂಮಿ ಖರೀದಿಯು ನನ್ನ ಆತ್ಮದೊಂದಿಗೆ ಆಳವಾಗಿ ಸಂಪರ್ಕಿಸುವ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ಇದು ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವಾಗಿದೆ” ಎಂದಿದ್ದಾರೆ.
ಅಮಿತಾಬ್ ಬಚ್ಚನ್ ಭೂಮಿ ಖರೀದಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ HoABL ಅಧ್ಯಕ್ಷ ಅಭಿನಂದನ್ ಲೋಧಾ, “ರಾಮಮಂದಿರದಿಂದ ಸುಮಾರು 15 ನಿಮಿಷಗಳ ದೂರದಲ್ಲಿರುವ ಮತ್ತು ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 30 ನಿಮಿಷಗಳ ದೂರದಲ್ಲಿರುವ ‘ದಿ ಸರಯೂ’ದ “ಪ್ರಥಮ ಪ್ರಜೆ” ಎಂದು ಅಮಿತಾಬ್ ಬಚ್ಚನ್ ಅವರನ್ನು ಸ್ವಾಗತಿಸಲು ನಾವು ಸಂಭ್ರಮಿಸುತ್ತೇವೆ” ಎಂದು ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆ ಅತಿಥಿಗಳ ಪಟ್ಟಿ
ಜಾಗತಿಕವಾಗಿ ಎಲ್ಲರ ಗಮನ ಸೆಳೆಯುತ್ತಿರುವ ಅಯೋಧ್ಯೆ ರಾಮ ಮಂದಿರದ ಭವ್ಯ ಉದ್ಘಾಟನೆಗೆ ನಗರವು ತಯಾರಿ ನಡೆಸುತ್ತಿದೆ. ಕಾರ್ಯಕ್ರಮದಲ್ಲಿ ಮನರಂಜನೆ, ಕ್ರೀಡೆ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ವ್ಯಕ್ತಿಗಳು ಹಾಜರಾಗಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರಣಬೀರ್ ಕಪೂರ್, ಆಲಿಯಾ ಭಟ್, ರಿಷಬ್ ಶೆಟ್ಟಿ, ಯಶ್, ನಿಖಿಲ್ ಕುಮಾರಸ್ವಾಮಿ, ರಾಮ್ ಚರಣ್ ಮತ್ತು ಕಂಗನಾ ರನೌತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.
ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾ ಅಥವಾ ರಾಮ್ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಸಮಾರಂಭದ ವೈದಿಕ ಆಚರಣೆಗಳು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಅಂದರೆ ಜನವರಿ 16 ರಂದು ಪ್ರಾರಂಭವಾಗುತ್ತವೆ. ಜನವರಿ 22 ರಂದು ಮುಖ್ಯ ಕಾರ್ಯಕ್ರಮ ನಡೆಯಲಿದೆ.