ಗಂಡ ತನ್ನ ಮಗನನ್ನು ಪದೇ ಪದೇ ಭೇಟಿಯಾಗುವ ಸಿಟ್ಟಿಗೆ 4 ವರ್ಷದ ಮಗನನ್ನೆ ಕೊಂದಳಾ ಸಿಇಓ? ನಿಜಕ್ಕೂ ಆಗದ್ದೇನು..!
ಚಿತ್ರದುರ್ಗ: ಬೆಂಗಳೂರಿನ ಭರವಸೆಯ ಎಐ ಸ್ಟಾರ್ಟಪ್ ಕಂಪನಿಯ ಸಿಇಒ (AI Startup CEO) ಸುಚನಾ ಸೇಠ್ ಎಂಬವರು ತನ್ನ ನಾಲ್ಕು ವರ್ಷದ ಪುಟ್ಟ ಮಗುವನ್ನು ಅತ್ಯಂತ ಭಯಾನಕವಾಗಿ ಕೊಂದು ಹಾಕಿದ ಘಟನೆಯ ಹಿಂದಿನ ಭಯಾನಕ ಸತ್ಯಗಳು ಒಂದೊಂದಾಗಿ ಹೊರಬೀಳುತ್ತಿವೆ. ಬೆಂಗಳೂರಿನಲ್ಲಿದ್ದ ಆಕೆ ತನ್ನ ಮಗನನ್ನು ಗೋವಾಗೆ ಕರೆದುಕೊಂಡು ಹೋಗಿ ಅಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಮಗುವನ್ನು ಕೊಂದು ಖಾಸಗಿ ಟ್ಯಾಕ್ಸಿಯಲ್ಲಿ ಶವವನ್ನು ಹಿಡಿದುಕೊಂಡು ಬರುವ ವೇಳೆ ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದಿದ್ದಾಳೆ. ಆಕೆಯ ವಿಚಾರಣೆಯ ವೇಳೆ ಕೆಲವೊಂದು ಭಯಾನಕ ಸಂಗತಿಗಳು ಹೊರಬರುತ್ತಿವೆ. ಒಂದು ಮೂಲದ ಪ್ರಕಾರ ಆಕೆ ತನ್ನ ಗಂಡನ ಮೇಲಿನ ಸಿಟ್ಟಿಗೆ ಮಗುವನ್ನು ಬಲಿ ಕೊಟ್ಟಿದ್ದಾಳೆ!
39 ವರ್ಷದ ಸುಚನಾ ಸೇಠ್ (Suchana Seth) ಬೆಂಗಳೂರಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ (Mindful AI Labs) ಸಹ-ಸ್ಥಾಪಕಿ ಹಾಗೂ ಸಿಇಒ. ಸುಚನಾ ಸೇಠ್ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದಳು. ಸೋಮವಾರ ಆಕೆ ಕೊಠಡಿಯಿಂದ ಒಬ್ಬಂಟಿಯಾಗಿ ಚೆಕ್ ಔಟ್ ಮಾಡಿದ್ದಳು. ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದಳು. ವಿಮಾನದಲ್ಲಿ ತೆರಳಲು ಸಿಬ್ಬಂದಿ ಸಲಹೆ ನೀಡಿದರೂ ಒಪ್ಪದೆ ಟ್ಯಾಕ್ಸಿಯಲ್ಲಿ ಬಂದಿದ್ದ ಆಕೆ ಅದೇ ಕಾರಿನಲ್ಲಿ ತನ್ನ ನಾಲ್ಕು ವರ್ಷದ ಮಗನ ಹೆಣವನ್ನು ಸಾಗಿಸಿದ್ದಳು. ಆದರೆ, ಇದು ಅಪಾರ್ಟ್‌ಮೆಂಟ್‌ನ ಸಿಬ್ಬಂದಿಗೆ ಸಂಶಯ ಬಂದು ಕಾರಿನ ಚಾಲಕನ ಸಂಪರ್ಕ ಸಾಧಿಸಿ ಚಿತ್ರದುರ್ಗ ಠಾಣೆಗೆ ಮಾಹಿತಿ ನೀಡಿ ಆಕೆಯನ್ನು ವಶಕ್ಕೆ ಪಡೆದಾಗ ಕೊಲೆಯ ಭಯಾನಕ ಸ್ಟೋರಿ ಬಿಚ್ಚಿಕೊಂಡಿತ್ತು.
#Murder|| Suchana Seth, mother who killed her 4-year-old son, booked for murder and also under Goa Children's Act: SP Nidhin Valsan pic.twitter.com/Dox6kZM015
— Goa News Hub (@goanewshub) January 9, 2024
ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
ಸುಚನಾ ಶೇಠ್ ಮಗುವನ್ನು ಕೊಂದ ಬಳಿಕ ಏನೂ ಆಗಿಲ್ಲ ಎಂಬಂತೆ ಕಾರಿನಲ್ಲಿ ಹೊರಟಿದ್ದಳು. ಹಾಗಿದ್ದರೆ ಆಕೆ ಮಗುವನ್ನು ಕೊಂದಿದ್ದಾಳೆ ಎಂಬ ಸಂಶಯ ಬಂದಿದ್ದಾದರೂ ಹೇಗೆ?
ಸುಚನಾ ಶೇಠ್ ಆ ಅಪಾರ್ಟ್‌ಮೆಂಟ್‌ಗೆ ಬಂದಾಗ ಆಕೆಯ ಜತೆ ಮಗು ಇರುವುದನ್ನು ಸಿಬ್ಬಂದಿ ಗಮನಿಸಿದ್ದರು. ಆದರೆ, ಚೆಕ್‌ಔಟ್ ಮಾಡುವಾಗ ಮಗು ಇರಲಿಲ್ಲ. ಈ ನಡುವೆ ಅಪಾರ್ಟ್‌ಮೆಂಟ್‌ನ ಕ್ಲೀನಿಂಗ್ ಸಿಬ್ಬಂದಿ ಕೋಣೆಗೆ ಹೋಗಿ ನೋಡಿದಾಗ ಅಲ್ಲಿ ರಕ್ತದ ಕಲೆಗಳನ್ನು ಗಮನಿಸಿದ್ದರು. ಆಗ ಇಡೀ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ, ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಗೋವಾ ಪೊಲೀಸರಿಗೆ ಮಾಹಿತಿ ನೀಡಿದರು.
ಈ ನಡುವೆ ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಸುಚನಾ ಸೇಠ್ ಅವರೊಂದಿಗೆ ಮಾತನಾಡಿದ್ದರು. ಆಕೆಯ ಮಗನ ಬಗ್ಗೆ ಕೇಳಿದಾಗ, ಅವನು ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳಿ ಒಂದು ವಿಳಾಸ ನೀಡಿದ್ದಳು. ಆದರೆ ಅದು ನಕಲಿ ಎಂದು ತಿಳಿದುಬಂತು!
ಈ ನಡುವೆ, ಪೊಲೀಸರು ಮತ್ತೆ ಚಾಲಕನಿಗೆ ಕರೆ ಮಾಡಿ, ಸುಚನಾಗೆ ಅರ್ಥವಾಗದಂತೆ ಕೊಂಕಣಿ ಭಾಷೆಯಲ್ಲಿ ಕ್ಯಾಬ್ ಅನ್ನು ಚಿತ್ರದುರ್ಗದ ಪೊಲೀಸ್ ಠಾಣೆ ಕಡೆಗೆ ತಿರುಗಿಸಲು ಆದೇಶಿಸಿದ್ದರು. ಕಾರು ಅಲ್ಲಿಗೆ ಬಂದ ಬಳಿಕ ಸುಚನಾಳನ್ನು ಬಂಧಿಸಿದ್ದರು. ಆಕೆಯ ಬ್ಯಾಗ್‌ನಲ್ಲಿ ಆಕೆಯ ಮಗನ ಶವ ಪತ್ತೆಯಾಗಿತ್ತು.
ಹಾಗಿದ್ದರೆ ಆಕೆ ಮಗುವನ್ನು ಕೊಂದಿದ್ದು ಯಾಕೆ?
ಸುಚನಾ ಸೇಠ್ ಕಾರಿನಲ್ಲಿ ಸಾಗಿಸುತ್ತಿದ್ದ ಮಗುವಿನ ಶವವನ್ನು ಪೊಲೀಸರು ಬ್ಯಾಗ್‌ನಿಂದ ತೆಗೆದು ಹಿರಿಯೂರು ತಾಲೂಕಾ ಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಶವಾಗಾರಕ್ಕೆ ವೈದ್ಯಾಧಿಕಾರಿ ಕುಮಾರ್ ನಾಯಕ್ ಭೇಟಿ ನೀಡಿದ್ದಾರೆ. ಮಗುವಿನ ಕತ್ತು ಭಾಗದಲ್ಲಿ ನರಗಳು ಊದಿಕೊಂಡಿವೆ. ಕತ್ತಿನ ಭಾಗದ ನರಗಳು ಕಪ್ಪು ವರ್ಣಕ್ಕೆ ತಿರುಗಿವೆ. ಹೀಗಾಗಿ ಸುಚನಾ ತನ್ನ ಮಗುವನ್ನು ಕತ್ತು ಹಿಸುಕಿ ಸಾಯಿಸಿದ ಶಂಕೆ ಇದೆ. ಆದರೆ, ರಕ್ತದ ಕಲೆಗಳೂ ಕಂಡುಬಂದಿರುವುದರಿಂದ ಚೂರಿ ಹಾಕಿ ಸಾಯಿಸಿರುವ ಸಾಧ್ಯತೆಯೂ ಇದೆ. ಎರಡೂ ಪ್ರಕ್ರಿಯೆಗಳು ನಡೆದಿರುವ ಸಾಧ್ಯತೆ ಇದೆ.
ಗೋವಾ ಪೊಲೀಸರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹಿರಿಯೂರಲ್ಲಿ ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಕುಮಾರ್ ನಾಯಕ್ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ ಸುಚನಾ ಶೇಠ್ ಅವರಿಗೆ 2010ರಲ್ಲಿ ವೆಂಕಟರಾಮನ್ ಎಂಬ ಟೆಕ್ಕಿ ಜತೆ ಮದುವೆಯಾಗಿದೆ. ಅವರ ಸಂಬಂಧದಲ್ಲಿ 2019ರಲ್ಲಿ ಮಗುವೊಂದು ಹುಟ್ಟಿದೆ. ಇದಾದ ಬಳಿ ಅವರಿಬ್ಬರ ನಡುವೆ ಕಲಹ ಉಂಟಾಗಿತ್ತು. 2020ರಲ್ಲಿ ಕೋರ್ಟ್ ಮೂಲಕ ಡೈವೋರ್ಸ್ ಸಿಕ್ಕಿತ್ತು. ಕೋರ್ಟ್ ಮಗುವನ್ನು ಸುಚನಾ ಸೇಠ್ ಜತೆ ಇರಲು ಅವಕಾಶ ನೀಡಿತ್ತು. ಆದರೆ, ಪ್ರತಿ ಶನಿವಾರ ಗಂಡ ಮಗುವನ್ನು ಭೇಟಿ ಮಾಡಬಹುದು ಎಂದು ಅವಕಾಶ ನೀಡಿತ್ತು.
ಸುಚನಾ ಸೇಠ್‌ಗೆ ವೆಂಕಟರಾಮನ್ ಆಗಾಗ ಮಗನನ್ನು ಭೇಟಿಯಾಗಲು ಬರುವುದು ಇಷ್ಟವಾಗುತ್ತಿರಲಿಲ್ಲ. ಅದರ ವಿಚಾರದಲ್ಲೂ ಅವರಿಗೆ ಜಗಳವಾಗಿತ್ತು. ಹೀಗಾಗಿ ಮೊದಲ ಗಂಡನ ಮೇಲಿನ ಸಿಟ್ಟಿನಲ್ಲಿ ಸುಚನಾ ತನ್ನ ಮಗುವನ್ನೇ ಕೊಂದು ಹಾಕಿದ್ದಾಳೆ ಎನ್ನುವುದು ಪ್ರಾಥಮಿಕ ಮಾಹಿತಿ. ಗಂಡ ವೆಂಕಟರಾಮನ್ ಈಗ ಇಂಡೋನೇಷ್ಯಾದ ಜಕಾರ್ತದಲ್ಲಿದ್ದು, ಅವರಿಗೆ ಮಗನ ಸಾವಿನ ಮಾಹಿತಿ ನೀಡಲಾಗಿದೆ. ಅವರು ಬಂದ ಮೇಲೆಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ.