ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ; ಚಿನ್ನಾಭರಣ ಮತ್ತು ಕಂತೆ ಕಂತೆ ನೋಟು ಪತ್ತೆ..!
ಬೆಂಗಳೂರು, ಜನವರಿ 09: ಲೋಕಾಯುಕ್ತ (Lokayukta) ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಬಳ್ಳಾರಿ, ರಾಮನಗರ ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ನಾಲ್ಕು ಹಾಗೂ ರಾಮನಗರದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಈ ದಾಳಿ ನಡೆಸಿದೆ. ಪಿಡಬ್ಯೂಡಿ (PWD), ಪಿಡಿಓ (PDO) , ಬೆಸ್ಕಾಂ (BESCOM), ಕೆಆರ್ಐಡಿಎಲ್ (KRIDL) ಹಾಗೂ ಪಂಚಾಯತ್ ಸದಸ್ಯ ಮತ್ತು ಟೌನ್ ಪ್ಲ್ಯಾನಿಂಗ್ ಅಧಿಕಾರಿಗೆ ಸೇರಿದ ಜಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಆಗಿರುವ ಸತೀಶ್ ಬಾಬು ಅವರ ಚಿತ್ರದುರ್ಗ ಮತ್ತು ಬೆಂಗಳೂರು ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೋಲಾರ ಮೂಲದ ಇಂಜಿನಿಯರ್ ಸತೀಶ್ ಬಾಬು, ಈ ಹಿಂದೆ ಚಿತ್ರದುರ್ಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ಸತೀಶ್ ಬಾಬು ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ಕಳೆದ 1 ಗಂಟೆಯಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾಸಲುಪುರ ಗ್ರಾಮದಲ್ಲಿರುವ ಟೌನ್ ಅಂಡ್ ರೂರಲ್ ಪ್ಲ್ಯಾನಿಂಗ್ ಜಂಟಿ ನಿರ್ದೇಶಕ ಮಂಜೇಶ್ ಅವರ ಮಂಜೇಶ್ ಫಾರ್ಮ್ಹೌಸ್ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಮಂಜೇಶ್ ಆನೇಕಲ್ನಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಮಂಜೇಶ್ ಅವರಿಗೆ ಸೇರಿದ 9 ಕಡೆ ರಾಮನಗರ ಲೋಕಾಯುಕ್ತ ಇನ್ಸ್ಪೆಕ್ಟರ್ ಲಕ್ಷ್ಮಣ್ ನೇತೃತ್ವದಲ್ಲಿ ದಾಳಿ ನಡೆದಿದೆ.
ನೆಲಮಂಗಲದ ಕುಂದಾಣ ಪಿಡಿಒ ಪದ್ಮನಾಬ್ ಅವರಿಗೆ ಸೇರಿದ ಮೂರು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮನೆ ಮೇಲೆ, ದಾಬಸ್ ಪೇಟೆ ಹಾಗೂ ತುಮಕೂರಿನಲ್ಲಿ ಪದ್ಮನಾಬ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ.
ಕೆಆರ್ಐಡಿಎಲ್ನ ಎಇಇ ಸೈಯದ್ ಮುನೀರ್ ಮನೆ ಮೇಲೆ ಲೋಕಾಯುಕ್ತ ರೇಡ್ ಮಾಡಿದೆ. ಸೈಯದ್ ಮುನೀರ್ ಅಹ್ಮದ್ಗೆ ಸೇರಿದ 6 ಕಡೆಯಲ್ಲಿ ದಾಳಿ ನಡೆದಿದ್ದು, ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ವಿದೇಶಿ ಕರೆನ್ಸಿ, ಚಿನ್ನ, ಬೆಳ್ಳಿ ಆಭರಣ, ವಾಚ್ಗಳು, ಮೊಬೈಲ್ ಪತ್ತೆಯಾಗಿವೆ.
ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ಎಂ.ಎಲ್. ನಾಗರಾಜ್ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಎರಡು ಮತ್ತು ಬಳ್ಳಾರಿಯ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಾಗರಾಜ್ 7.50 ಲಕ್ಷ ರೂ. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ದಾಳಿ ವೇಳೆ 9 ನಿವೇಶನ, ಮೂರು ಮನೆ, ಎರಡು ಪೆಟ್ರೋಲ್ ಬಂಕ್, ಶಿಕ್ಷಣ ಸಂಸ್ಥೆ ಮತ್ತು ನಾಲ್ಕು ಕಡೆ ಕೃಷಿ ಜಮೀನು ಹೊಂದಿರುವ ದಾಖಲೆ ಪತ್ತೆಯಾಗಿದೆ.